ಜೈಪುರ (ರಾಜಸ್ಥಾನ):ರಾಜಸ್ಥಾನ ರಾಯಲ್ಸ್ ನೀಡಿದ್ದ ಅಲ್ಪ ಮೊತ್ತದ ಗುರಿಯನ್ನು ಗುಜರಾತ್ ಟೈಟಾನ್ಸ್ 13.5 ಓವರ್ಗಳಲ್ಲಿ 1 ವಿಕೆಟ್ ನಷ್ಟದಿಂದ ತಲುಪಿತು. ಆರಂಭಿಕರಾದ ಗಿಲ್ ಮತ್ತು ಸಹಾ 71 ರನ್ ಜೊತೆಯಾಟ ಮಾಡಿದರೆ, ಗಿಲ್ ನಂತರ ಬಂದ ನಾಯಕ ಹಾರ್ದಿಕ್ ಪಂದ್ಯವನ್ನು 6 ಓವರ್ ಬಾಕಿ ಇರುವಂತೆ 9 ವಿಕೆಟ್ನಿಂದ ಗೆದ್ದುಕೊಂಡರು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ ರಾಯಲ್ಸ್ 17.5 ಓವರ್ಗೆ ಆಲ್ ಔಟ್ ಆಗಿ 119 ರನ್ನ ಗುರಿಯನ್ನು ಗುಜರಾತ್ಗೆ ನೀಡಿತ್ತು. ಈ ಗುರಿಯನ್ನು ಹಾಲಿ ಚಾಂಪಿಯನ್ಗಳು ಒಂದು ವಿಕೆಟ್ ನಷ್ಟದಿಂದ ಗೆದ್ದುಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್ ಸಹಾ ಮತ್ತು ಶುಭಮನ್ ಗಿಲ್ ಉತ್ತಮ ಜೊತೆಯಾಟ ಮಾಡಿದರು. ಈ ಆರಂಭಿಕ ಜೋಡಿ 10 ಓವರ್ಗಳಲ್ಲಿ 71 ರನ್ ಕಲೆಹಾಕಿತು. ರಾಜಸ್ಥಾನದ ತ್ರಿವಳಿ ಸ್ಪಿನ್ ದಾಳಿಗೆ ತಕ್ಕ ಉತ್ತರವನ್ನು ಈ ಜೋಡಿ ಕೊಟ್ಟಿತು. ಶುಭಮನ್ ಗಿಲ್ 36 ರನ್ (35 ಬಾಲ್ , 6x4) ಗಳಿಸಿದ್ದಾಗ ಮಿಸ್ಟ್ರಿ ಸ್ಪಿನ್ನರ್ ಯಜುವೇಂದ್ರ ಚಹಾಲ್ಗೆ ವಿಕೆಟ್ ಕೊಟ್ಟರು.
ಗಿಲ್ ವಿಕೆಟ್ ನಂತರ ಬಂದ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಮಾಡಿದರು. ಬರುತ್ತಿದ್ದಂತೆ ಬೌಂಡರಿ, ಸಿಕ್ಸ್ಗಳನ್ನು ಬಾರಿಸಿದರು. ಇದರಿಂದ ರನ್ನ ವೇಗ ಇನ್ನಷ್ಟು ಹೆಚ್ಚಾಯಿತು. ಗೆಲುವು ಬೇಗ ಸಮೀಪಿಸಿತು. ಆರಂಭಿಕ ವೃದ್ಧಿಮಾನ್ ಸಹಾ ನಿಧಾನವಾಗಿ ಹಾರ್ದಿಕ್ಗೆ ಸಾಥ್ ಕೊಟ್ಟರು.
ಈ ಜೋಡಿ ಅಜೇಯವಾಗಿ ಉಳಿದು ಪಂದ್ಯವನ್ನು ಗೆಲ್ಲಿಸಿಕೊಟ್ಟಿತು. ಹಾರ್ದಿಕ್ ಪಾಂಡ್ಯ 15 ಬಾಲ್ಗೆ 3 ಸಿಕ್ಸ್ ಮತ್ತು 3 ಬೌಂಡರಿಯಿಂದ 39 ರನ್ ಗಳಿಸಿದರು. ವೃದ್ಧಿಮಾನ್ ಸಹಾ 34 ಬಾಲ್ನಲ್ಲಿ 5 ಬೌಂಡರಿಯಿಂದ 41 ರನ್ಗಳಿಸಿದರು. ರಾಜಸ್ಥಾನ ಪರ ಚಹಾಲ್ ಒಂದು ವಿಕೆಟ್ ಪಡೆದರು.
ರಾಜಸ್ಥಾನ ಇನ್ನಿಂಗ್ಸ್: ಇದಕ್ಕೂ ಮುನ್ನ ಗುಜರಾತ್ ಟೈಟಾನ್ಸ್ನ ಸ್ಪಿನ್ನರ್ಗಳ ಕಠಿಣ ದಾಳಿಗೆ ರಾಜಸ್ಥಾನ ರಾಯಲ್ಸ್ 17.5 ಓವರ್ಗೆ 118 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಜಿಟಿ ಬೌಲರ್ಗಳಾದ ರಶೀದ್ ಖಾನ್ ಮತ್ತು ನೂರ್ ಅಹ್ಮದ್ ರಾಜಸ್ಥಾನದ ಪ್ರಮುಖ ಬ್ಯಾಟರ್ಗಳನ್ನು ಉರುಳಿಸಿ 119 ರನ್ನ ಸಾಧಾರಣ ಗುರಿ ಪಡೆದುಕೊಂಡರು.