ನವದೆಹಲಿ:ಇನ್ನೆರಡು ಪಂದ್ಯಗಳಿಂದ ವುಮೆನ್ಸ್ ಪ್ರೀಮಿಯರ್ ಲೀಗ್ ಮುಕ್ತಾಯವಾಗಲಿದೆ. ಅದರ ಬೆನ್ನಲ್ಲೇ ಮಾರ್ಚ್ 31ಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಭಾರತದ ಚುಟುಕು ಕ್ರಿಕೆಟ್ನ ಜಾತ್ರೆಯನ್ನು ವೀಕ್ಷಿಸಲು ವಿಶ್ವದ ಅನೇಕ ರಾಷ್ಟಗಳ ಅಭಿಮಾನಿಗಳು ಕಾತುರದಿಂದಿದ್ದಾರೆ. ಬಹುತೇಕ ತಂಡಗಳು ಅಭ್ಯಾಸ ಆರಂಭಿಸಿವೆ. ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡುತ್ತಿರುವ ಆಟಗಾರರು ಸರಣಿಗಳು ಮುಕ್ತಾಯವಾಗುತ್ತಿದ್ದಂತೆ ತಂಡವನ್ನು ಸೇರಿಕೊಳ್ಳುತ್ತಿದ್ದಾರೆ.
ದೆಹಲಿ ಕ್ಯಾಪಿಟಲ್ಸ್ ನಾಯಕ, ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ ತಂಡವನ್ನು ಸೇರಿಕೊಂಡಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ತಮ್ಮ ಹೊಸ ನಾಯಕನ ಆಗಮನವನ್ನು ವಿಭಿನ್ನವಾಗಿ ಹಂಚಿಕೊಂಡಿದೆ. ವಾರ್ನ್ರ್ ಬಂದಿಳಿಯುವ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಡಿಸಿ ಹಂಚಿಕೊಂಡಿದೆ. ಈ ವಿಡಿಯೋಕ್ಕೆ ಅಲ್ಲು ಅರ್ಜುನ್ ಅಭಿನಯದ ಪುಷ್ಪ -1 ಚಿತ್ರದ ಬಿಜಿಎಂ ಹಾಕಿ ಎಡಿಟ್ ಮಾಡಲಾಗಿದೆ.
ವಿಡಿಯೋದಲ್ಲಿ ಡೇವಿಡ್ ವಾರ್ನರ್ 'ಡೆಲ್ಲಿ ಮೇ ಆಗಯಾ' ಮತ್ತು 'ಟ್ರೈನಿಂಗ್ ತೋ ಬನ್ತಾ ಹೈ' ಎಂದು ಹೇಳಿಕೊಂಡಿದ್ದಾರೆ. ಮುಖ ಮಾರ್ಫ್ ಮಾಡಿ ವಿಡಿಯೋಗಳನ್ನು ಮಾಡಿ ಇನ್ಸ್ಟಾ ರೀಲ್ಸ್ನಲ್ಲಿ ಹಲವಾರು ವಿಡಿಯೋಗಳನ್ನು ವಾರ್ನರ್ ಹಂಚಿಕೊಳ್ಳುತ್ತಾರೆ. ಅವರಿಗೆ ಭಾರತೀಯ ಸಿನಿಮಾಗ ಬಗ್ಗೆ ಆಸಕ್ತಿ ಇದೆ. ಅಲ್ಲದೇ ಬಂದಿಳಿಯುತ್ತಿದ್ದಂತೆ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮಾಡುವ ಸಿಗ್ನೇಚರ್ ಸ್ಟೈಲ್ ಮಾಡಿದ್ದಾರೆ.
ಡೇವಿಡ್ ವಾರ್ನರ್ ಅವರು ರಿಷಬ್ ಪಂತ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಪಂತ್ 2022 ಡಿಸೆಂಬರ್ 30 ರಂದು ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. "ರಿಷಬ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಅದ್ಭುತ ನಾಯಕರಾಗಿದ್ದರು. ನಾವೆಲ್ಲರೂ ಅವರ ಸುತ್ತಲೂ ಇರುವುದನ್ನು ಕಳೆದುಕೊಳ್ಳುತ್ತೇವೆ. ಅವರು ಯಾವಾಗಲೂ ನಮ್ಮಲ್ಲಿ ತೋರಿಸಿರುವ ನಂಬಿಕೆಗಾಗಿ ನಾನು ಮ್ಯಾನೇಜ್‌ಮೆಂಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಫ್ರಾಂಚೈಸ್ ಯಾವಾಗಲೂ ನನಗೆ ಮನೆಯಾಗಿದೆ, ಅಂತಹ ಅತ್ಯಂತ ಪ್ರತಿಭಾವಂತ ಆಟಗಾರರ ಗುಂಪನ್ನು ಮುನ್ನಡೆಸಲು ನಾನು ಹೆಚ್ಚು ಉತ್ಸುಕನಾಗಿದ್ದೇನೆ" ಎಂದು ವಾರ್ನರ್ ತಿಳಿಸಿದ್ದಾರೆಂದು ಡೆಲ್ಲಿ ಕ್ಯಾಪಿಟಲ್ಸ್ ಉಲ್ಲೇಖಿಸಿದೆ.