ಚೆನ್ನೈ (ತಮಿಳುನಾಡು): ಭಾರತದ ಲೆಜೆಂಡರಿ ವಿಕೆಟ್ ಕೀಪರ್ ಕಂ ಬ್ಯಾಟರ್ ಎಂ.ಎಸ್.ಧೋನಿ ಇಂದು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ 200ನೇ ನಾಯಕತ್ವದ ಪಂದ್ಯ ಆಡುತ್ತಿದ್ದಾರೆ. ಸಿಎಸ್ಕೆ ತಂಡವು ಚೆಪಾಕ್ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್ ಅನ್ನು ಎದುರಿಸಲಿದೆ. ಸ್ಪಿನ್‌ಸ್ನೇಹಿ ಪಿಚ್‌ನಲ್ಲಿ ಯಾರು ಪಾರಮ್ಯ ಸಾಧಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಈ ಪಂದ್ಯವನ್ನು ಸ್ಪಿನ್ನರ್‌ಗಳ ಕಾಳಗವೆಂದು ಕರೆದರೆ ತಪ್ಪಾಗದು. ಚೆನ್ನೈ ಬಳಗದಲ್ಲಿ ಮೊಯಿನ್ ಅಲಿ, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಮಹೇಶ್ ತೀಕ್ಷಣ ಇದ್ದರೆ, ಅತ್ತ ಆರ್ಆರ್ನಲ್ಲಿ ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಾಹಲ್ ಇದ್ದಾರೆ. ಚೆಪಾಕ್ ಪಿಚ್ ನಿಧಾನಗತಿಯ ಸ್ಪಿನ್ ಸ್ನೇಹಿಯಾಗಿದ್ದು ಪಂದ್ಯದಲ್ಲಿ ಬ್ಯಾಟರ್ಗಳಿಗೆ ಸವಾಲಾಗಲಿದೆ.
ಚೆನ್ನೈ ತಂಡವು ಉದ್ಘಾಟನಾ ಪಂದ್ಯದಲ್ಲಿ ಸೋತ ನಂತರ ಸತತ ಎರಡು ಗೆಲುವು ಪಡೆದಿದೆ. ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಮಣಿಸಿ ಗೆಲುವಿನ ಟ್ರ್ಯಾಕ್ಗೆ ಮರಳಿತ್ತು. ಬಳಿಕ ಮುಂಬೈ ಇಂಡಿಯನ್ಸ್ ಸೋಲಿಸಿತ್ತು. ಇಂದು ನಾಲ್ಕನೇ ಪಂದ್ಯ ಆಡುತ್ತಿದ್ದು, 3ನೇ ಗೆಲುವನ್ನು ಎದುರು ನೋಡುತ್ತಿದೆ. ರುತುರಾಜ್ ಗಾಯಕ್ವಾಡ್ ಜೊತೆಗೆ ಅಜಿಂಕ್ಯ ರಹಾನೆ ಅವರು ಲಯಕ್ಕೆ ಮರಳಿರುವುದು ಚೆನ್ನೈಗೆ ಪ್ಲಸ್ ಪಾಯಿಂಟ್. ಆರಂಭಿಕ ಆಟಗಾರ ಡೆವೊನ್ ಕಾನ್ವೆ ಇನ್ನುಳಿದಂತೆ ಶಿವಂ ದುಬೆ, ರವೀಂದ್ರ ಜಡೇಜಾ ಮತ್ತು ಎಂ.ಎಸ್.ಧೋನಿಯ ಬ್ಯಾಟ್ನಿಂದಲೂ ರನ್ಗಳು ಬಂದರೆ ತಂಡ ಇನ್ನಷ್ಟು ಬಲಿಷ್ಟವಾಗಲಿದೆ.
ರಾಜಸ್ಥಾನದಲ್ಲಿ ಬಟ್ಲರ್, ಜೈಸ್ವಾಲ್ ಮತ್ತು ಸಂಜು ಲಯದಲ್ಲಿದ್ದಾರೆ. ಇವರಿಗೆ ಇತರೆ ಬ್ಯಾಟರ್ಗಳು ಸಾಥ್ ಕೊಡುವ ಅಗತ್ಯವಿದೆ. ಅಶ್ವಿನ್ ಅವರನ್ನು ಆರಂಭಿಕರಾಗಿಳಿಸಿ ಪ್ರಯೋಗ ಮಾಡಿ ಸೋಲನುಭವಿಸಿದ ಸಂಜು ಇಂದು ಬೇರೆ ಹೊಸ ಪ್ರಯತ್ನಗಳನ್ನು ಮಾಡುತ್ತಾರಾ ಎಂಬುದನ್ನು ಕಾದುನೋಡಬೇಕು.