ಪುಣೆ:ರುತುರಾಜ್ ಗಾಯಕ್ವಾಡ್ ಹಾಗು ಡೇವನ್ ಕಾನ್ವಾಯ್ ಅವರ ಆಕರ್ಷಕ ಸಿಕ್ಸರ್ ಪ್ರದರ್ಶನ ಹಾಗು ಮುಖೇಶ್ ಚೌಧರಿ ನಾಲ್ಕು ವಿಕೆಟ್ ಸಾಧನೆಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಎದುರು 13 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.
ಭಾನುವಾರ ರಾತ್ರಿ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಗಾಯಕ್ವಾಡ್ 57 ಎಸೆತಗಳಲ್ಲಿ 99 ರನ್ ಕಲೆ ಹಾಕಿ ಶತಕದಂಚಿನಲ್ಲಿ ಎಡವಿದರು. ಅಷ್ಟೇ ಸ್ಫೋಟಕವಾಗಿ ಬ್ಯಾಟ್ ಬೀಸಿದ ಡೇವನ್ ಕಾನ್ವಾಯ್ 55 ಎಸೆತಗಳಲ್ಲಿ 85 ರನ್ ಚಚ್ಚಿದರು. ಇವರಿಬ್ಬರು ಹೈದರಾಬಾದ್ ತಂಡದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಆಕರ್ಷಕ 182 ರನ್ ಜೊತೆಯಾಟ ನೀಡಿದರು. ಇದು ಈ ಸೀಸನ್ನಿನಲ್ಲಿ ಅತಿ ದೊಡ್ಡ ಓಪನಿಂಗ್ ಪಾರ್ಟ್ನರ್‌ಶಿಪ್ ಕೂಡಾ ಹೌದು. ಈ ಮೂಲಕ ಸಿಎಸ್‌ಕೆ ತಂಡ 20 ಓವರುಗಳ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 202 ರನ್‌ಗಳ ಬೃಹತ್ ಗುರಿ ನೀಡಿತ್ತು.