ನವದೆಹಲಿ: ಐಪಿಎಲ್ 2023 ರಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಪ್ರಸ್ತುತ 13 ಪಂದ್ಯಗಳಿಂದ 5 ಗೆಲುವು ಮತ್ತು 8 ಸೋಲುಗಳೊಂದಿಗೆ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ. ಪ್ಲೇ ಆಫ್‌ಗೆ ಹೋಗುವ ಅವಕಾಶದಿಂದ ಡೆಲ್ಲಿ ಹೊರಗುಳಿದಿದೆ. ಇನ್ನೂ ಒಂದು ಪಂದ್ಯ ಡೆಲ್ಲಿ ಔಪಚಾರಿಕವಾಗಿ ಆಡಬೇಕಿದೆ. ನಾಳೆ ಮಧ್ಯಹ್ನ 3:30ಕ್ಕೆ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕೊನೆಯ ಪಂದ್ಯ ಆಡಲಿದೆ. ತಂಡಲ್ಲಿ ಈ ಆವೃತ್ತಿಯಲ್ಲಿ ಬೆರಳೆಣಿಕೆಯ ಆಟಗಾರರು ಯಶಸ್ವಿಯಾಗಿದ್ದಾರೆ. ಆದರೆ, ನಿರೀಕ್ಷಿತ ಪ್ಲೇಯರ್ಗಳು ವೈಫಲ್ಯತೆ ಅನುಭವಿಸಿದ್ದಾರೆ.
ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನ ಕಂಡು ಬಂತು. ಡೆಲ್ಲಿ ಕ್ಯಾಪಿಟಲ್ಸ್‌ನ ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸುವಲ್ಲಿ ಕೊರತೆ ಅನುಭವಿಸಿದ್ದು ಸೋಲಿಗೆ ಪ್ರಮುಖ ಕಾರಣವಾಗಿದೆ. ರಿಷಬ್ ಪಂತ್ ಗಾಯದ ಸಮಸ್ಯೆಯಿಂದ ಇಡೀ ಋತುವಿನಲ್ಲಿ ಹೊರಗುಳಿದಿದ್ದಾರೆ. ಅಂತೆಯೇ ಮಿಚೆಲ್ ಮಾರ್ಷ್ ಲಭ್ಯವಿಲ್ಲ ಮತ್ತು ರೋವ್ಮನ್ ಪೊವೆಲ್ ಫಾರ್ಮ್ನಲ್ಲಿರಲಿಲ್ಲ. ಈ ಕಾರಣಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಬೌಲಿಂಗ್‌ನಲ್ಲಿಯೂ ನೋಕಿಯಾ ಹೊರತು ಪಡಿಸಿದರೆ ಮಿಕ್ಕ ಆಟಗಾರರು ಫಾರ್ಮ್ನಲ್ಲಿ ಕಂಡು ಬರಲಿಲ್ಲ. ಈ ಕಾರಣಗಳಿಂದ ಡೆಲ್ಲಿ ತಂಡ ಸತತ ಸೋಲು ಎದುರಿಸಬೇಕಾಗಿದೆ.
ನಾಯಕ ಡೇವಿಡ್ ವಾರ್ನರ್ ಉತ್ತಮ ಬ್ಯಾಟಿಂಗ್: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ತಮ್ಮ ತಂಡಕ್ಕಾಗಿ ಉತ್ತಮ ಇನ್ನಿಂಗ್ಸ್ಗಳನ್ನು ಕಟ್ಟಿದ್ದಾರೆ. ಅವರು ಇಲ್ಲಿಯವರೆಗೆ ಆಡಿದ 13 ಪಂದ್ಯಗಳಲ್ಲಿ 430 ರನ್ ಗಳಿಸುವ ಮೂಲಕ ತಮ್ಮ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಅವರು ತಮ್ಮ ನಾಯಕತ್ವಕ್ಕಾಗಿ ಟೀಕೆಗಳನ್ನು ಎದುರಿಸಬೇಕಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಆಲ್‌ರೌಂಡರ್ ಅಕ್ಷರ್ ಪಟೇಲ್ 13 ಪಂದ್ಯಗಳಲ್ಲಿ ಬೌಲಿಂಗ್ ಮಾಡುವಾಗ 11 ವಿಕೆಟ್ ಪಡೆದು, 268 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದಾರೆ.