ಕೋಲ್ಕತ್ತಾ (ಪಶ್ಚಿಮ ಬಂಗಾಳ):ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗೆದ್ದಿರುವ ಆರ್‌ಸಿಬಿ ಈ ಪಂದ್ಯದಲ್ಲೂ ಗೆಲ್ಲುವ ಉತ್ಸಾಹದಲ್ಲಿದೆ. ಕೆಕೆಆರ್ ತಂಡದಲ್ಲಿ 19 ವರ್ಷದ ಸುಯಶ್ ಶರ್ಮಾ ಪಾದಾರ್ಪಣೆ ಮಾಡಿದ್ದಾರೆ.
ಈಡನ್ ಗಾರ್ಡನ್ಸ್‌ನಲ್ಲಿಂದು ಐಪಿಎಲ್ ಟೂರ್ನಿಯ 9ನೇ ಪಂದ್ಯ ನಡೆಯುತ್ತಿದೆ. ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲಿ ಗೆದ್ದ ಹುಮ್ಮಸ್ಸಿನಲ್ಲಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಕೆಕೆಆರ್ ಗೆಲ್ಲಬೇಕಾದ ಒತ್ತಡದಲ್ಲಿದೆ. ಹೀಗಾಗಿ ಪಂದ್ಯ ಉಭಯ ತಂಡಗಳ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಬೆಂಗಳೂರು ತಂಡಕ್ಕೆ ಬ್ಯಾಟರ್‌ಗಳು ಬಲವಾಗಿದ್ದರೆ, ಕೋಲ್ಕತ್ತಾಗೆ ಬೌಲರ್ಗಳು ಭರವಸೆಯ ಪಟುಗಳಾಗಿದ್ದಾರೆ.
ಆರ್‌ಸಿಬಿ ಮತ್ತು ಕೆಕೆಆರ್ ಇದುವರೆಗೆ ಒಟ್ಟು 30 ಬಾರಿ ಮುಖಾಮುಖಿಯಾಗಿವೆ. ಎರಡೂ ತಂಡಗಳು ಸಮಬಲ ಪ್ರದರ್ಶನವನ್ನೇ ನೀಡಿವೆ. ಕೆಕೆಆರ್ 16 ಬಾರಿ ಗೆಲುವು ಕಂಡಿದ್ದರೆ, ಬೆಂಗಳೂರು 14 ಬಾರಿ ಗೆಲುವು ಸಾಧಿಸಿದೆ. ಆದ್ದರಿಂದ ಇದು ಇತ್ತಂಡಗಳ ನಡುವಿನ ಹೈವೊಲ್ಟೇಜ್ ಪಂದ್ಯವಾಗಿದೆ.
ಮಳೆ ಕಾರಣ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಏಳು ರನ್‌ಗಳಿಂದ ಕೆಕೆಆರ್ ಸೋಲು ಅನುಭವಿಸಿತ್ತು. ಹಾಲಿ ಟೂರ್ನಿಯಲ್ಲಿ ಕೋಲ್ಕತ್ತಾ ತನ್ನ ತವರಿನಲ್ಲಿ ಮೊದಲ ಪಂದ್ಯ ಆಡುತ್ತಿದೆ. ಆರ್‌ಸಿಬಿ ತವರು ನೆಲದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದ ನಂತರ ಹೊರಗೆ ಮೊದಲ ಪಂದ್ಯ ಆಡುತ್ತಿದೆ.
ಆರ್‌ಸಿಬಿ ತಂಡದಲ್ಲಿ ಬದಲಾವಣೆ:ಟಾಸ್ ಗೆದ್ದ ನಂತರ ಆರ್‌ಸಿಬಿ ನಾಯಕ ಡು ಪ್ಲೆಸಿಸ್ ಮಾತನಾಡಿ, ರೀಸ್ ಟೋಪ್ಲೆ ಬದಲಿಗೆ ಆಲ್‌ರೌಂಡರ್ ಡೇವಿಡ್ ವಿಲ್ಲಿ ತಂಡ ಸೇರಿದ್ದಾರೆ. ಎಡಗೈ ಆಟಗಾರ ಟೋಪ್ಲೆ ಅವರಿಗೆ ಫೀಲ್ಡಿಂಗ್ ಮಾಡುವಾಗ ಬಲ ಭುಜಕ್ಕೆ ಪೆಟ್ಟಾಗಿದೆ ಎಂದು ತಿಳಿಸಿದರು.
ಪಿಚ್ ಬಗ್ಗೆ ಮಾತನಾಡಿದ ಆರ್‌ಸಿಬಿ ಕ್ಯಾಪ್ಟನ್, "ಕಳೆದ ರಾತ್ರಿ ಇಬ್ಬನಿ ಇತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಅದು ಸ್ಕಿಡ್ ಆಗುವ ನಿರೀಕ್ಷೆಯಿದೆ. ಪ್ಲೇಆಫ್‌ಗಳನ್ನು ತಲುಪುವುದು ಇನ್ನೂ ಬಹಳ ದೂರವಿದೆ. ಇಂದು ಸಂಪೂರ್ಣವಾಗಿ ಹೊಸ ಆಟ. ಜೊತೆಗೆ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ" ಎಂದರು.