ದುಬೈ :2021ರ ಐಪಿಎಲ್ ಮುಗಿಯುತ್ತಿದ್ದಂತೆ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿರುವ ವಿರಾಟ್ ಕೊಹ್ಲಿಯನ್ನು ಲೀಗ್ ಮಧ್ಯದಲ್ಲೇ ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆ ಇದೆ ಎಂದು ಭಾರತದ ಮಾಜಿ ಕ್ರಿಕೆಟಿಗರೊಬ್ಬರು ಹೇಳಿದ್ದಾರೆ.
ಸೋಮವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ತಂಡ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿ, ಹೀನಾಯ ಸೋಲು ಕಂಡಿತ್ತು. ಪುನಾರಂಭಗೊಂಡ ಐಪಿಎಲ್ನಲ್ಲಿ ಕೇವಲ 92 ರನ್ಗಳಿಗೆ ಆಲೌಟ್ ಆಗುವ ಮೂಲಕ ಕಳಪೆ ಪ್ರದರ್ಶನ ತೋರಿತ್ತು. ಅಲ್ಲದೆ ಇದು ಆರ್ಸಿಬಿಯ 6ನೇ ಕಡಿಮೆ ಮೊತ್ತವಾಗಿದೆ. ಇದರಲ್ಲಿ ಕೆಕೆಆರ್ ವಿರುದ್ಧವೇ 3ನೇ ಅಲ್ಪ ಮೊತ್ತವಾಗಿತ್ತು. ಈ ಮೊತ್ತವನ್ನು ಕೆಕೆಆರ್ ಕೇವಲ 1 ವಿಕೆಟ್ ಕಳೆದುಕೊಂಡು 10 ಓವರ್ಗಳಲ್ಲಿ ಗುರಿ ತಲುಪಿತ್ತು.
ಇನ್ನು, ಕೊಹ್ಲಿ ಕೇವಲ 4 ಎಸೆತಗಳಲ್ಲಿ 5 ರನ್ಗಳಿಸಿ ಪ್ರಸಿಧ್ ಕೃಷ್ಣ ಅವರ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂಗೆ ಬಲಿಯಾಗಿದ್ದರು. ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಪಂದ್ಯದುದ್ದಕ್ಕೂ ವಿರಾಟ್ ಕೊಹ್ಲಿ ಅವರ ದೇಹ ಭಾಷೆ ಹಿಂದಿನಂತೆ ಕಂಡು ಬರಲಿಲ್ಲ. ಈಗಾಗಲೇ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ಕೊಹ್ಲಿ ಈ ಸಂದರ್ಭದಲ್ಲಿ ನಾಯಕತ್ವ ತ್ಯಜಿಸಿದ್ದು ಸರಿಯಲ್ಲ, ಇದರಿಂದ ತಂಡದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಅದು ಮೊದಲ ಪಂದ್ಯದಲ್ಲೇ ನಿಜವಾಗಿತ್ತು.
ಇದೀಗ IANSಗೆ ನೀಡಿದ ಸಂದರ್ಶನವೊಂದರಲ್ಲಿ ಭಾರತದ ಮಾಜಿ ಕ್ರಿಕೆಟಿಗರೊಬ್ಬರು ಆರ್‌ಸಿಬಿ ಟೂರ್ನಿಯ ಮಧ್ಯ ಭಾಗದಲ್ಲೇ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆಯಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಕುರಿತು ಈಗಾಗಲೇ ಫ್ರಾಂಚೈಸಿ ಚರ್ಚೆ ನಡೆಸಿದ್ದು, ಕೊಹ್ಲಿ ಸ್ಥಾನಕ್ಕೆ ಮತ್ತೋರ್ವ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಈ ನಿರ್ಧಾರಕ್ಕೆ ಕೊಹ್ಲಿ ಕೂಡ ಒಪ್ಪಿಗೆ ಸೂಚಿಸಲಿದ್ದಾರೆ ಎಂದು ಏಜೆನ್ಸಿಗೆ ತಿಳಿಸಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅವರು ಆಡಿದ ರೀತಿ ನೋಡಿದರೆ, ಅವರು ತುಂಬಾ ದೊಡ್ಡ ಸಮಸ್ಯೆ ಅನುಭವಿಸುತ್ತಿದ್ದಾರೆ ಎನಿಸುತ್ತದೆ. ಹಾಗಾಗಿ, ಆವೃತ್ತಿಯ ಮಧ್ಯದಲ್ಲೇ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆಯಿದೆ. ಸೀಸನ್ ಮಧ್ಯೆ ನಾಯಕತ್ವ ಬದಲಾವಣೆ ಹೊಸದೇನಲ್ಲ. ಈಗಾಗಲೇ ಕೆಕೆಆರ್ ತಂಡ ದಿನೇಶ್ ಕಾರ್ತಿಕ್ ಅವರನ್ನು ಕೆಳಗಿಳಿಸಿ ಮಾರ್ಗನ್‌ಗೆ, ಸನ್ರೈಸರ್ಸ್ ಹೈದರಾಬಾದ್ ಡೇವಿಡ್ ವಾರ್ನರ್ರನ್ನು ಕೆಳಗಿಳಿಸಿ ಕೇನ್ ವಿಲಿಯಮ್ಸನ್ರನ್ನು ನಾಯಕನನ್ನಾಗಿ ನೇಮಿಸಿದ್ದವು.
2018ರಲ್ಲಿ ಗೌತಮ್ ಗಂಭೀರ್ ತಮ್ಮ ಕಳಪೆ ಫಾರ್ಮ್ನಿಂದ ಬೇಸತ್ತು ಸ್ವತಃ ತಾವಾಗಿಯೇ ನಾಯಕತ್ವದಿಂದ ಕೆಳಗಿಳಿದು ಶ್ರೇಯಸ್ ಅಯ್ಯರ್ಗೆ ನಾಯಕತ್ವ ನೀಡಿದ್ದರು. ಜೊತೆಗೆ ತಮ್ಮ 2.8 ಕೋಟಿ ಹಣವನ್ನು ಫ್ರಾಂಚೈಸಿಯಿಂದ ತೆಗೆದುಕೊಳ್ಳುವುದಿಲ್ಲ ಎಂದು ಘೋಷಿಸಿಕೊಂಡಿದ್ದರು. ಆರ್‌ಸಿಬಿ ಸೆಪ್ಟೆಂಬರ್ 24ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ತನ್ನ 9ನೇ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಕೊಹ್ಲಿಯೇ ಮುಂದುವರಿಯಲಿದ್ದಾರೆ ಅಥವಾ ಮತ್ತೊಬ್ಬ ಆಟಗಾರನಿಗೆ ನಾಯಕತ್ವ ಬಿಟ್ಟುಕೊಟ್ಟು ಕೇವಲ ಬ್ಯಾಟ್ಸ್ಮನ್ ಆಗಿ ಆಡಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.
ಇದನ್ನು ಓದಿ:ಈ ಸಾಲಿನ ಐಪಿಎಲ್ ಬಳಿಕ ಆರ್‌ಸಿಬಿ ನಾಯಕ ಸ್ಥಾನದಿಂದಲೂ ಕೆಳಗಿಳಿಯಲಿರುವ ಕೊಹ್ಲಿ