ದುಬೈ:ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ಜನರ ದೈನಂದಿನ ಜೀವನ ಶೈಲಿಯಲ್ಲಿ ಹಲವು ಬದಲಾವಣೆಗಳಾಗಿದ್ದು, ಇದಕ್ಕೆ ಕ್ರಿಕೆಟ್ ಕೂಡ ಹೊರತಾಗಿಲ್ಲ. ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ಹಲವು ನಿಯಮ ಜಾರಿಗೆ ತರಲಾಗಿದೆ.
ಈಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ಲೀಗ್ ಪಂದ್ಯಗಳಲ್ಲಿ ಬೌಲಿಂಗ್ ಮಾಡುತ್ತಿರುವ ತಂಡದ ನಾಯಕ ಅಥವಾ ಆಟಗಾರನೊಬ್ಬ ಎರಡೆರಡು ಕ್ಯಾಪ್ ಧರಿಸುತ್ತಿರುವುದನ್ನು ಕಾಣಬಹುದಾಗಿದೆ. ಮೊನ್ನೆ ನಡೆದ ಆರ್ಸಿಬಿ ಮತ್ತು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ನಾಯಕ ಇಯಾನ್ ಮಾರ್ಗನ್ 2 ಕ್ಯಾಪ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಈ ಹಿಂದೆ ಬೌಲರ್ಗಳು ಬೌಲಿಂಗ್ ಮಾಡುವ ಮುನ್ನ ತಮ್ಮ ಟೋಪಿಯನ್ನು ಅಂಪೈರ್ಗೆ ನೀಡುತ್ತಿದ್ದರು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಅಂಪೈರ್ಗೆ ಬದಲಾಗಿ ತಂಡದ ನಾಯಕ ಅಥವಾ ಸಹ ಆಟಗಾರರಿಗೆ ಟೋಪಿಯನ್ನು ನೀಡಲಾಗುತ್ತಿದೆ. ಹೀಗಾಗಿ ಕೆಲವರ ತಲೆಯ ಮೇಲೆ ಎರಡೆರಡು ಕ್ಯಾಪ್ ಕಾಣಿಸುತ್ತಿವೆ.
ಪಂದ್ಯದ ವೇಳೆ ಆಟಗಾರರು ಟವೆಲ್, ಸನ್ ಗ್ಲಾಸ್, ಕ್ಯಾಪ್ ಇಟ್ಟುಕೊಂಡಿರುತ್ತಾರೆ. ಇವುಗಳನ್ನು ಅಂಪೈರ್ ಬಳಿ ಕೊಟ್ಟು ಹೋಗುವಂತಿಲ್ಲ. ಹೀಗಾಗಿ, ಅವರು ತಂದಿರುವ ಎಲ್ಲಾ ವಸ್ತುಗಳನ್ನು ಅವರೇ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಟಗಾರರು ಮತ್ತು ಅಂಪೈರ್‌ಗಳು ಕ್ರಿಕೆಟ್ ಮೈದಾನದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿದೆ.