ಅಬುಧಾಬಿ: ವಿಶ್ವದ ಶ್ರೀಮಂತ ಟೂರ್ನಿ ಐಪಿಎಲ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು 13ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಟ ನಡೆಸಲಿವೆ. ಕೋವಿಡ್-19 ಕಾಲಘಟ್ಟದಲ್ಲಿನ ಸ್ಫೋಟಕ ಆಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಪ್ರಿಯರು ತುದಿಗಾಲಲ್ಲಿ ನಿಂತಿದ್ದು, ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಬರೆಯಲಿದೆ ಎನ್ನಲಾಗುತ್ತಿದೆ.
ಯುಎಇನಿಂದಲೇ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್, ಐಪಿಎಲ್ ಇತಿಹಾಸದಲ್ಲೇ ಈ ವರ್ಷದ ಟೂರ್ನಿ ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಬರೆಯಲಿದೆ ಎಂದು ಹೇಳಿದ್ದಾರೆ.
ಮಹಾಮಾರಿ ಕೋವಿಡ್-19 ಬಂದ ನಂತರ ಈ ಬಾರಿಯ ಐಪಿಎಲ್ ಆಯೋಜನೆಗೆ ಎದುರಿಸಿದ ಸವಾಲುಗಳನ್ನು ಹಂಚಿಕೊಂಡಿದ್ದಾರೆ. ನಿಗದಿಯಂತೆ ಮಾರ್ಚ್ 29ಕ್ಕೆ ಟೂರ್ನಿ ಆರಂಭವಾಗಬೇಕಿತ್ತು. ವೈರಸ್‌ನಿಂದಾಗಿ ಅದು ಸಾಧ್ಯವಾಗಿಲ್ಲ. ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತ ಬಳಿಕ ಕೊನೆಗೆ ಪಂದ್ಯಗಳು ಆರಂಭವಾಗುತ್ತಿರುವುದು ತೃಪ್ತಿ ತಂದಿದೆ ಎಂದಿದ್ದಾರೆ.
ಐಪಿಎಲ್ ಮುಂದೂಡಿಕೆಯಿಂದ ಅಭಿಮಾನಿಗಳು ಕೊಂಚ ಬೇಸರ ಮಾಡಿಕೊಂಡಿದ್ದರು. ಟೂರ್ನಿ ಆಯೋಜನೆ ಬಗ್ಗೆ ಮೊದಲಿಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಇದೀಗ ಕ್ರೀಡಾಭಿಮಾನಿಗಳು ಕ್ರಿಕೆಟ್‌ನ ನೇರಪ್ರಸಾರವನ್ನು ವೀಕ್ಷಿಸಲಿದ್ದಾರೆ. ವೀಕ್ಷಕರ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಯುಎಇನಲ್ಲಿ ಐಪಿಎಲ್ ಆಯೋಜನೆಗೆ ಅವಕಾಶ ನೀಡಿದ ಬಿಸಿಸಿಐ, ಕೇಂದ್ರ ಸರ್ಕಾರ ಹಾಗೂ ಐಪಿಎಲ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಬೆಂಬಲವನ್ನು ಪಟೇಲ್ ಕೊಂಡಾಡಿದ್ದಾರೆ.