ಶಾರ್ಜಾ: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇದರ ಭಾಗವಾಗಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವಾಲನ್ನು ಕೆ.ಎಲ್.ರಾಹುಲ್ ಪಡೆ ಎದುರಿಸಲಿದೆ.
ಉತ್ತಮ ಆಟ ಪ್ರದರ್ಶಿಸಲು ವಿಫಲವಾಗುತ್ತಿರುವ ಪಂಜಾಬ್ ತಂಡ ಇಲ್ಲಿಯವರೆಗೆ ಆಡಿದ 7 ಪಂದ್ಯಗಳಲ್ಲಿ 1 ಪಂದ್ಯವನ್ನಷ್ಟೆ ಗೆದ್ದಿದೆ. ಉಳಿದ 6 ಪಂದ್ಯಗಳಲ್ಲಿ ಸೋಲುಂಡಿದೆ. ಇತ್ತ ಮೋರಿಸ್ ಆಗಮನದ ನಂತರ ಆರ್‌ಸಿಬಿ ಬೌಲಿಂಗ್ ಬಲ ಹೆಚ್ಚಿದ್ದು, ಆಡಿದ 7 ಪಂದ್ಯಗಳ ಪೈಕಿ 5 ರಲ್ಲಿ ಜಯ ಸಾಧಿಸಿ 2 ಪಂದ್ಯಗಳನ್ನು ಕೈಚೆಲ್ಲಿದೆ.
ಪಂಜಾಬ್ ತಾನು ಗೆದ್ದಿರುವ ಒಂದು ಪಂದ್ಯ ಆರ್‌ಸಿಬಿ ವಿರುದ್ಧವೇ ಎನ್ನುವುದು ಗಮನಿಸಬೇಕಾದ ಅಂಶ. ಟೂರ್ನಿಯಲ್ಲಿ ಗರಿಷ್ಠ ರನ್ಗಳಿಸಿದ ಇಬ್ಬರು ಆಟಗಾರರು ಪಂಜಾಬ್ ತಂಡದಲ್ಲಿದ್ದರೂ ಗೆಲ್ಲಲು ಸಾಧ್ಯವಾಗುತ್ತಿಲ್ಲ. ತಂಡದ ಮಧ್ಯಮ ಕ್ರಮಾಂಕ ಕೊಂಚ ಮಂಕಾಗಿದ್ದು, ಸಿಡಿಯುವ ಆಟಗಾರರಿಲ್ಲ. ಮ್ಯಾಕ್ಸ್ವೆಲ್ ವೈಫಲ್ಯ ತಂಡಕ್ಕೆ ಹೆಚ್ಚು ಹೊಡೆತ ನೀಡಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ
ಆರಂಭದ ಪಂದ್ಯಗಳಲ್ಲಿ ಮಿಂಚಿದ್ದ ವೇಗಿ ಕಾಟ್ರೇಲ್ ಕಮಾಲ್ ಮಾಡ್ತಿಲ್ಲ. ಮೊಹಮ್ಮದ್ ಶಮಿ ಮತ್ತು ರವಿ ಬಿಷ್ಣೋಯಿ ಹೊರತುಪಡಿಸಿ ಪಂಜಾಬ್ ತಂಡದ ಯಾವುದೇ ಬೌಲರ್‌ಗಳು ಗಮನಾರ್ಹ ಪ್ರದರ್ಶನ ನೀಡುತ್ತಿಲ್ಲ. ಫುಡ್ ಪಾಯ್ಸನ್ ಕಾರಣದಿಂದ ಕಳೆದ 2 ಪಂದ್ಯದಲ್ಲಿ ಆಡಲು ಸಾಧ್ಯವಾಗದ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯೋದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಆರ್‌ಸಿಬಿ ಬಲಿಷ್ಠವಾಗಿದೆ. ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್, ಫಿಂಚ್, ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಹಾಲ್ ಕಮಾಲ್ ಮಾಡುತ್ತಿದ್ದಾರೆ. ವೇಗಿ ಕ್ರಿಸ್ ಮೋರಿಸ್ ತಂಡಕ್ಕೆ ಎಂಟ್ರಿ ಕೊಟ್ಟಾಗಿನಿಂದ ವೇಗದ ಬೌಲಿಂಗ್‌ನಲ್ಲಿ ಚುರುಕು ಬಂದಿದೆ. ಸಿರಾಜ್, ಸೈನಿ, ಉಡಾನ ಕೂಡ ಡೀಸೆಂಟ್ ಸ್ಪೆಲ್ ಮಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇಲ್ಲಿಯವರೆಗೂ ಉಭಯ ತಂಡಗಳು 25 ಬಾರಿ ಮುಖಾಮುಖಿಯಾದ್ದು, 13ರಲ್ಲಿ ಪಂಜಾಬ್ ಜಯ ಸಾಧಿಸಿದ್ರೆ, 12 ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿವೆ.