ಶಾರ್ಜಾ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಮೋಘ ಪ್ರದರ್ಶನ ನೀಡುತ್ತಿದ್ದು, ತಂಡದ ನಾಯಕ ಶ್ರೇಯಸ್ ಐಯ್ಯರ್ ಸಂತಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 46 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಪ್ಟನ್ ಶ್ರೇಯಸ್ ಐಯ್ಯರ್ "ನಾನು ನಾಯಕತ್ವವನ್ನು ಆನಂದಿಸುತ್ತಿದ್ದೇನೆ. ಏಕೆಂದರೆ ಆಟಗಾರರು, ವಿಶೇಷವಾಗಿ ಬೌಲರ್‌ಗಳು ನನ್ನ ಜವಾಬ್ದಾರಿಯನ್ನು ಸುಲಭಗೊಳಿಸುತ್ತಿದ್ದಾರೆ. ನಮ್ಮ ಸಪೋರ್ಟಿಂಗ್ ಸ್ಟಾಫ್ ತಂಡದ ಸಭೆಗಳನ್ನು ನಿರ್ವಹಿಸುವ ವಿಧಾನವೂ ಶ್ಲಾಘನೀಯ" ಎಂದಿದ್ದಾರೆ.
"ನಮ್ಮ ತಂಡದಲ್ಲಿ ಉತ್ತಮ ಆಟಗಾರರ ಮಿಶ್ರಣವಿದೆ ಮತ್ತು ನಾವು ಈ ಬಗ್ಗೆ ನಿಜವಾಗಿಯೂ ಶ್ರಮಿಸಿದ್ದೇವೆ. ನಮ್ಮ ಹುಡುಗರು ತಮ್ಮ ಆಲೋಚನೆಗಳನ್ನು ಪೂರ್ವ ಪ್ರವಾಸ ಮತ್ತು ಅವರ ಸಾಮರ್ಥ್ಯ, ದೌರ್ಬಲ್ಯಗಳನ್ನು ಹಂಚಿಕೊಂಡಿದ್ದಾರೆ. ನಾವು ಹೇಗೆ ಪ್ರಗತಿ ಹೊಂದುತ್ತಿದ್ದೇವೋ ಅದೇ ಆವೇಗವನ್ನು ಕಾಪಾಡಿಕೊಳ್ಳಲು ಆಶಿಸುತ್ತಿದ್ದೇವೆ. ನಾವು ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರತೀ ಬಾರಿಯೂ ಉತ್ತಮ ಯೋಜನೆಗಳೊಂದಿಗೆ ಬರಬೇಕು. ಅವುಗಳನ್ನು ಚೆನ್ನಾಗಿ ಕಾರ್ಯಗತಗೊಳಿಸಬೇಕು" ಎಂದಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿತು. ಮರುತ್ತರವಾಗಿ ಬ್ಯಾಟಿಂಗ್ ನಡೆಸಿದ ರಾಜಸ್ಥಾನ ತಂಡ ರನ್ ಗಳಿಸಲು ಪರದಾಡಿತು. ಉತ್ತಮವಾಗಿ ಬೌಲಿಂಗ್ ನಡೆಸಿ, ಡೆಲ್ಲಿ ತಂಡದ ಪರ ಕಗಿಸೊ ರಬಾಡಾ ಮೂರು ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ ಮತ್ತು ಮಾರ್ಕಸ್ ಸ್ಟೋಯಿನಿಸ್ ತಲಾ ಎರಡು ವಿಕೆಟ್ ಕಬಳಿಸಿದರು. ರಾಜಸ್ಥಾನ ರಾಯಲ್ಸ್ 138 ರನ್ಗಳಿಗೆ ಸರ್ವಪತನ ಕಂಡಿತು.