13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳು ಹೊಡಿಬಡಿ ಆಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದ್ದು, ಸರಣಿ ಆರಂಭಕ್ಕೆ 1 ದಿನ ಬಾಕಿ ಇರುವಂತೆ ತಂಡದ ಅಧಿಕೃತ ಆಂಥೆಮ್ ಇಂದು ಬಿಡುಗಡೆ ಮಾಡಲಾಗಿದೆ.
ಆರ್‌ಸಿಬಿ ಅಧಿಕೃತ ಆಂಥೆಮ್ ಬಿಡುಗಡೆ: ಅಭಿಮಾನಿಗಳಿಗೆ ಅರ್ಪಣೆ ಈ ಗೀತೆಯನ್ನು ಆರ್‌ಸಿಬಿ ಫ್ರಾಂಚೈಸಿ ಅಭಿಮಾನಿಗಳಿಗೆ ಅರ್ಪಿಸಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ರಾಯಲ್ ಚಾಲೆಂಜರ್ಸ್, ಆರ್‌ಸಿಬಿಯ ಅಧಿಕೃತ ಆಂಥೆಮ್ ಬಿಡುಗಡೆಯಾಗಿದೆ. ಇದನ್ನು ವಿಶ್ವಾದ್ಯಂತ ಇರುವ ಅಭಿಮಾನಿಗಳಿಗೆ ಅರ್ಪಿಸುತ್ತಿರುವುದಾಗಿ ಹೇಳಿದೆ.
ಕೋವಿಡ್-19 ತಡೆಗೆ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವವರಿಗೆ ಗೌರವ ಸಲ್ಲಿಸುವ ಸಲುವಾಗಿ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಈ ಬಾರಿ 'ಮೈ ಕೋವಿಡ್ ಹೀರೋಸ್' ಎಂಬ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಅಭ್ಯಾಸದ ವೇಳೆ ಮತ್ತು ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಇದೇ ಹೆಸರಿನ ಜರ್ಸಿ ತೊಡಲಿದ್ದು, ಜರ್ಸಿಯ ಹಿಂಭಾಗದಲ್ಲಿ ಮೈ ಕೋವಿಡ್ ಹೀರೋಸ್ ಎಂದು ಬರೆಯಲಾಗಿದೆ.
ಮೊದಲ ಪಂದ್ಯದ ವೇಳೆ ಧರಿಸುವ ಜರ್ಸಿಯನ್ನು ಹಾರಾಜಿಗಿಟ್ಟು ಅದರಿಂದ ಬಂದ ಹಣವನ್ನು ಗೀವ್ ಇಂಡಿಯಾ ಫೌಂಡೇಷನ್‌ಗೆ ನೀಡಲಿದೆ. ಮಾತ್ರವಲ್ಲದೆ, ಇಡೀ ಟೂರ್ನಿಯಲ್ಲಿ ಕೋವಿಡ್ ಹೀರೋಗಳ ಬಗ್ಗೆ ಸ್ಫೂರ್ತಿದಾಯಕ ವಿಷಯಗಳನ್ನು ಆರ್‌ಸಿಬಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಿದೆ. ಇದೇ 21ರಂದು ಕೊಹ್ಲಿ ಪಡೆ ಸನ್ ರೈಸರ್ಸ್ ಹೈದಾರಾಬಾದ್ ತಂಡವನ್ನು ಎದುರಿಸಲಿದೆ.