ಇಸ್ಲಾಮಾಬಾದ್(ಪಾಕಿಸ್ತಾನ):ಭದ್ರತೆ ಕಾರಣ ನೀಡಿ, ಪಾಕ್ ವಿರುದ್ಧದ ಕ್ರಿಕೆಟ್ ಸರಣಿಯಿಂದ ನ್ಯೂಜಿಲ್ಯಾಂಡ್ ತಂಡ ಹಿಂದೆ ಸರಿದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸಚಿವರೊಬ್ಬರು ವಿವಾದಿತ ಹೇಳಿಕೆ ನೀಡಿದ್ದಾರೆ.
ಅಲ್ಲಿನ ಆಂತರಿಕ ವ್ಯವಹಾರಗಳ ಸಚಿವ ಶೇಖ್ ರಶೀದ್ ಜೊತೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅಲ್ಲಿನ ಮಾಹಿತಿ ತಂತ್ರಜ್ಞಾನ ಸಚಿವ ಫವಾದ್ ಚೌಧರಿ, 'ಪಾಕ್ ವಿರುದ್ಧದ ಏಕದಿನ ಸರಣಿಯಿಂದ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ ಹೊರಹೋಗಲು ಭಾರತ ಕಾರಣ. ಅಲ್ಲಿಂದಲೇ ಇ-ಮೇಲ್ ಮೂಲಕ ಬೆದರಿಕೆ ಕರೆ ಬಂದಿದೆ' ಎಂದು ಆರೋಪಿಸಿದ್ದಾರೆ.
ಇ-ಮೇಲ್ ಅನ್ನು ಭಾರತದಲ್ಲಿ ಜನರೇಟ್ ಮಾಡಲಾಗಿದೆ. ಆದರೆ VPN ಮೂಲಕ ಸಿಂಗಾಪುರ ಎಂಬ ಸ್ಥಳ ತೋರಿಸುತ್ತಿದೆ ಎಂದಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ ತಂಡ ಪಾಕ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲೂ ಇದೇ ರೀತಿಯ ನಕಲಿ ಬೆದರಿಕೆ ಕರೆ ಬಂದಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ:ನ್ಯೂಜಿಲ್ಯಾಂಡ್-ಇಂಗ್ಲೆಂಡ್ ಕ್ರಿಕೆಟ್ ಪ್ರವಾಸ ರದ್ದತಿಯಿಂದ ನಷ್ಟ: ಕಾನೂನು ಸಲಹೆ ಮೊರೆ ಹೋದ ಪಾಕ್
ನ್ಯೂಜಿಲ್ಯಾಂಡ್ ತಂಡ ಪಾಕ್ಗೆ ತೆರಳಿ ಏಕದಿನ ಸರಣಿಯಲ್ಲಿ ಭಾಗಿಯಾಗದೇ ಇದೀಗ ತವರಿಗೆ ಮರಳಿದ್ದು, ಇಂಗ್ಲೆಂಡ್ ಕೂಡ ಇದೇ ಹಾದಿ ತುಳಿದಿದೆ. ಇದರಿಂದ ಅಲ್ಲಿನ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊಡೆತ ಬಿದ್ದಿದೆ. ಈ ವಿಚಾರವಾಗಿ ನಿನ್ನೆ ಕೂಡ ಮಾತನಾಡಿದ್ದ ಚೌಧರಿ, ನ್ಯೂಜಿಲ್ಯಾಂಡ್-ಇಂಗ್ಲೆಂಡ್ ತಂಡಗಳು ಪ್ರವಾಸ ರದ್ದುಗೊಳಿಸಿರುವ ಕಾರಣ ನಮಗೆ ಸಾಕಷ್ಟು ನಷ್ಟವಾಗಿದೆ. ಎರಡೂ ಕ್ರಿಕೆಟ್ ಮಂಡಳಿಗಳ ವಿರುದ್ಧ ಕಾನೂನು ಸಲಹೆ ಪಡೆದುಕೊಂಡು, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಪಾಕ್ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಲಾಬಿ ನಡೆಯುತ್ತಿದೆ. ಅದು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದರು.