ಚಂಢೀಗಡ:ವಿಜಯ್ ಹಜಾರೆ ಟ್ರೋಫಿ ಪ್ರಸ್ತುತ ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ನಡೆಸಲಾಗುತ್ತಿದೆ. ಈ ಟೂರ್ನಿಯೂ ಭಾರತೀಯ ಆಟಗಾರರಿಗೆ ಅತ್ಯಂತ ಮಹತ್ವದ್ದಾಗಿದೆ. ಐಪಿಎಲ್ ಹರಾಜಿಗೂ ಮುನ್ನ ಹಲವು ಯುವ ಆಟಗಾರರು ಫ್ರಾಂಚೈಸಿಗಳ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಮತ್ತೆ ಕೆಲ ಆಟಗಾರರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಕಸರತ್ತು ನಡೆಸಿದ್ದಾರೆ. ಈ ಪೈಕಿ 31ರ ಹರೆಯದ ಆಟಗಾರ ಕೂಡ ಇಂಥದ್ದೇ ಸಾಧನೆ ಮಾಡಿದ್ದು, ತಮ್ಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದಾರೆ.
ಭಾರತದ ವೇಗದ ಬೌಲರ್ ದೀಪಕ್ ಚಹಾರ್ ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ರಾಜಸ್ಥಾನ ಮತ್ತು ಗುಜರಾತ್ ನಡುವಿನ 50 ಓವರ್‌ಗಳ ಪಂದ್ಯದಲ್ಲಿ ಗುಜರಾತ್ ವಿರದ್ಧ ಬಿಗಿ ಬೌಲಿಂಗ್ ದಾಳಿ ನಡೆಸಿ 6 ವಿಕೆಗಳನ್ನು ಪಡೆದು ಮಿಂಚಿದ್ದಾರೆ. ದೀಪಕ್ ಹೂಡಾ ನಾಯಕತ್ವದಲ್ಲಿ ರಾಜಸ್ಥಾನ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿತು. ಈ ಪಂದ್ಯದಲ್ಲಿ ರಾಜಸ್ಥಾನದ ಪರ ದೀಪಕ್ ಚಹಾರ್ ತಮ್ಮ 10 ಓವರ್‌ಗಳ ಕೋಟಾದಲ್ಲಿ 41 ರನ್‌ಗಳನ್ನು ನೀಡಿ 6 ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದರು. ಗುಜರಾತ್‌ನ ಆರಂಭಿಕ ಬ್ಯಾಟ್ಸ್‌ಮನ್ ಪ್ರಿಯಾಂಕ್ ಪಾಂಚಾಲ್ ಮತ್ತು ಐದು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಪಡೆದರು.