ಮುಂಬೈ (ಮಹಾರಾಷ್ಟ್ರ): ಇಂಗ್ಲೆಂಡ್ ಮಣಿಸಿದ ನಂತರ ಸಾಂಪ್ರದಾಯಿಕ ಕ್ರಿಕೆಟ್ ಮಾದರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಗೆಲುವು ಸಾಧಿಸುವ ಗುರಿಯೊಂದಿಗೆ ಹರ್ಮನ್‌ಪ್ರೀತ್ ಕೌರ್ ಪಡೆ ಮೈದಾನಕ್ಕಿಳಿಯುತ್ತಿದೆ. ಗುರುವಾರದಿಂದ (ಡಿ.21) ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭವಾಗಲಿದೆ. 40 ವರ್ಷದ ನಂತರ (1984ರಲ್ಲಿ ಇಲ್ಲಿ ಆಡಿದ್ದರು) ಮುಂಬೈನ ವಾಂಖೆಡೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿ ಆಗುತ್ತಿವೆ.
46 ವರ್ಷಗಳ ಕಾಲ ನಡೆದ ಎರಡು ತಂಡ 10 ಟೆಸ್ಟ್‌ಗಳಲ್ಲಿ ಮುಖಾಮುಖಿ ಆಗಿದ್ದು, ಭಾರತ ಒಂದೂ ಗೆಲುವನ್ನು ಸಾಧಿಸಿಲ್ಲ. ಐಸಿಸಿ ಟೂರ್ನಿಗಳಿಂದ ಹಿಡಿದು, ದ್ವಿಪಕ್ಷೀಯ ಸರಣಿಯಳಲ್ಲೂ ಆಸೀಸ್ ವನಿತೆಯರು ಬಲಿಷ್ಟವಾಗಿದ್ದಾರೆ. ಹೀಗಾಗಿ ಭಾರತಕ್ಕೆ ಈ ಸರಣಿ ಕಠಿಣವಾಗಿರುವುದಂತೂ ಪಕ್ಕಾ. ಆದರೆ ಇಂಗ್ಲೆಂಡ್ ವಿರುದ್ಧ ಭಾರತದ ಸ್ಪಿನ್ನರ್ಗಳು ಮಾಡಿದ ಕಮಾಲ್ ಆಸ್ಟ್ರೇಲಿಯಾ ಮೇಲೂ ನಡೆದರೆ ತಂಡದ ಗೆಲುವಿನ ಸಾಧ್ಯತೆ ಹೆಚ್ಚಿದೆ.
ಕಳೆದ ವಾರ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಬೌಲರ್‌ಗಳು, ವಿಶೇಷವಾಗಿ ದೀಪ್ತಿ ಶರ್ಮಾ ಅವರು ಇಂಗ್ಲೆಂಡ್ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿದರು. ಆಂಗ್ಲ ವನಿತೆಯರ ವಿರುದ್ಧ ಭಾರತ 347 ರನ್‌ಗಳ ಬೃಹತ್ ಜಯವನ್ನು ಗಳಿಸಿತು. ಇದು ಮಹಿಳಾ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಅಂತರದ ಗೆಲುವಾಗಿದೆ. ಈಗ ಅದೇ ತಂಡ ಆಸೀಸ್ ವಿರುದ್ಧವೂ ಆಡುತ್ತಿದ್ದು ವಾಂಖೆಡೆ ಮೈದಾನದಲ್ಲಿ ಮತ್ತೊಮ್ಮೆ ಸ್ಪಿನ್ ವರ್ಕ್ ಆದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಬಹುದು.
ಬೌಲಿಂಗ್ ಮೇಲೆ ಭರವಸೆ: ತವರಿನ ಪಿಚ್ನಲ್ಲಿ ಭಾರತದ ಬೌಲಿಂಗ್ ಮೇಲೆ ಒಂದಂಶ ಹೆಚ್ಚಿನ ಭರವಸೆ ಇದೆ. ಇಂಗ್ಲೆಂಡ್ಗೆ ಕಾಡಿದ ದೀಪ್ತಿ ಶರ್ಮಾ, ರೇಣುಕಾ ಸಿಂಗ್ ಠಾಕೂರ್ ಮತ್ತು ಪೂಜಾ ವಸ್ತ್ರಾಕರ್ ಎದುರಾಳಿಗಳಿ ಮಾರಕರಾಗಬಹುದು. ಇಂಗ್ಲೆಂಡ್ ವಿರುದ್ಧ ಇದೇ ತ್ರಿವಳಿ ಅಸ್ತ್ರಗಳು ಕೆಲಸ ಮಾಡಿತ್ತು. ಆಸೀಸ್ ತಂಡವನ್ನೂ ಇವರೇ ಕಾಡುವ ನಿರೀಕ್ಷೆ ಇದೆ.
ಶುಭಾ ಅನುಮಾನ: ಹರ್ಮನ್‌ಪ್ರೀತ್ ಕೌರ್ (49 ಮತ್ತು 44 ನಾಟೌಟ್), ಜೆಮಿಮಾ ರಾಡ್ರಿಗಸ್ (68) ಮತ್ತು ಯಾಸ್ತಿಕಾ ಭಾಟಿಯಾ (66) ಮತ್ತು ಶುಭಾ ಸತೀಶ್ (69) ಇಂಗ್ಲೆಂಡ್ ವಿರುದ್ಧ ಉತ್ತಮ ಪರಿಣಾಮಕಾರಿ ಬ್ಯಾಟಿಂಗ್ ಮಾಡಿದ್ದರು. ಶುಭಾ ಸತೀಶ್ ಆಂಗ್ಲರ ವಿರುದ್ಧ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದು ನಾಳಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ. ಅವರ ಬದಲಿಯಾಗಿ ತಂಡಕ್ಕೆ ಪ್ರಿಯಾ ಪುನಿಯಾ ಅಥವಾ ಹರ್ಲೀನ್ ಡಿಯೋಲ್ ಸೇರಿಕೊಳ್ಳುವ ನಿರೀಕ್ಷೆ ಇದೆ.
ಉತ್ತಮ ಆರಂಭದ ಕೊರತೆ:ಆಂಗ್ಲರ ವಿರುದ್ಧ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಭಾರತಕ್ಕೆ ದೊಡ್ಡ ಆರಂಭವನ್ನು ಕೊಡುವಲ್ಲಿ ಎರಡೂ ಇನ್ನಿಂಗ್ಸ್ನಲ್ಲಿ ಎಡವಿದ್ದಾರೆ. ಹೀಗಾಗಿ ಈ ಇಬ್ಬರ ಮೇಲೆ ಹೆಚ್ಚಿನ ಒತ್ತಡ ಇದ್ದು ಮೊದಲ ವಿಕೆಟ್ ಕನಿಷ್ಟ 100 ರನ್‌ಗಳ ಪಾಲುದಾರಿಕೆ ಮಾಡಿಕೊಡಬೇಕಿದೆ.
ಹೀಲಿ ನಾಯಕತ್ವಕ್ಕೆ ಪರೀಕ್ಷೆ: 40 ವರ್ಷಗಳ ನಂತರ ಮುಂಬೈನ ವಾಂಖೆಡೆಯಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ ಆಡುತ್ತಿದೆ. ಈ ಟೆಸ್ಟ್ ಅಲಿಸ್ಸಾ ಹೀಲಿ ನಾಯಕತ್ವಕ್ಕೆ ದೊಡ್ಡ ಪರೀಕ್ಷೆಯಾಗಿದೆ. ಆಸೀಸ್ ತಂಡದ ಯಶಸ್ವಿ ನಾಯಕಿ ಮೆಗ್ ಲ್ಯಾನಿಂಗ್ ನಿವೃತ್ತಿಯ ನಂತರ ಅಲಿಸ್ಸಾ ಹೀಲಿ ಮುಂದಾಳತ್ವದಲ್ಲಿ ತಂಡ ಮೊದಲ ಪ್ರವಾಸ ಇದಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಟೆಸ್ಟ್ ಎರಡು ವರ್ಷಗಳ ಹಿಂದೆ ಕರಾರಾದಲ್ಲಿ ನಡೆದಿತ್ತು. ಇದರಲ್ಲಿ ಸ್ಮೃತಿ ಮಂಧಾನ ಗಳಿಸಿದ 127 ಪಂದ್ಯದಲ್ಲಿ ಡ್ರಾ ಸಾಧಿಸಲು ಭಾರತಕ್ಕೆ ನೆರವಾಗಿತ್ತು.