ಮೊಹಾಲಿ (ಪಂಜಾಬ್):ತವರಿನಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗಿದೆ. ಮೂರು ಪಂದ್ಯಗಳ ಸರಣಿಯ ಭಾಗವಾಗಿ ಇಂದು ಮೊದಲ ಏಕದಿನ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಟಾಸ್ ಗೆದ್ದ ಭಾರತ ತಂಡ ಆಸ್ಟ್ರೇಲಿಯಾವನ್ನು ಮೊದಲು ಬ್ಯಾಟ್ ಮಾಡುವಂತೆ ಆಹ್ವಾನಿಸಿದೆ.
ಮೊದಲೆರಡು ಏಕದಿನ ಪಂದ್ಯಗಳಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕುಲದೀಪ್ ಯಾದವ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಕೆ.ಎಲ್.ರಾಹುಲ್ ತಂಡ ಮುನ್ನಡೆಸಲಿದ್ದಾರೆ. ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸುವುದು ಟೀಂ ಇಂಡಿಯಾಗೆ ದೊಡ್ಡ ಸವಾಲು ಕೂಡಾ ಹೌದು. ಕಮ್ಮಿನ್ಸ್ ನಾಯಕತ್ವದ ಕಾಂಗರೂ ತಂಡ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಕಳೆದುಕೊಂಡಿದ್ದರೂ ಉತ್ತಮ ಫಾರ್ಮ್‌ನಲ್ಲಿದೆ.
ಶ್ರೇಯಸ್ ಮೇಲೆ ಕಣ್ಣು:ಶ್ರೇಯಸ್ ಅಯ್ಯರ್ ಫಿಟ್ ಆಗಿದ್ದಾರೆಯೇ? ಅವರು ವಿಶ್ವಕಪ್‌ನಲ್ಲಿ ಆಡಬಹುದೇ ಎಂಬ ಬಗ್ಗೆ ಎಲ್ಲರಿಗೂ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಗಮನ ಅಯ್ಯರ್ ಮೇಲಿದೆ. 28ರ ಹರೆಯದ ಶ್ರೇಯಸ್ ಬೆನ್ನುನೋವಿನ ಕಾರಣ ಕಳೆದ ಆರು ತಿಂಗಳಿಂದ ಹೆಚ್ಚು ಕ್ರಿಕೆಟ್ ಆಡಿರಲಿಲ್ಲ. ತಂಡಕ್ಕೆ ಅವರ ಪುನರಾಗಮನದ ಹೊರತಾಗಿಯೂ, ಏಷ್ಯಾಕಪ್‌ನಲ್ಲಿ ಮತ್ತೆ ಬೆನ್ನುನೋವಿನಿಂದ ತೊಂದರೆಗೀಡಾದರು. ಕೇವಲ ಎರಡು ಪಂದ್ಯಗಳನ್ನು ಆಡಿದ್ದು, ಉಳಿದ ಪಂದ್ಯಗಳಿಂದ ಹೊರಗುಳಿದಿರುವುದರಿಂದ ಅವರ ಫಿಟ್ನೆಸ್ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ.
ಶ್ರೇಯಸ್ ಆರೋಗ್ಯವಾಗಿದ್ದಾರೆ ಎಂದು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಹೇಳಿದ್ದಾರೆ. ಆದರೆ ಅವರು ಎಷ್ಟು ಫಿಟ್ ಆಗಿದ್ದಾರೆ ಎಂಬುದು ಈ ಸರಣಿಯ ಮೂಲಕ ತಿಳಿದುಬರಲಿದೆ. ಈ ಪರಿಸ್ಥಿತಿಗಳಲ್ಲಿ ಅವರು ಹೇಗೆ ಫಾರ್ಮ್ ಕಂಡುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಶ್ರೇಯಸ್ ನಂತರ ಮುಂಬೈನ ಮತ್ತೊಬ್ಬ ಬ್ಯಾಟರ್ ಸೂರ್ಯಕುಮಾರ್ ಯಾದವ್ಗೆ ಈ ಸರಣಿ ದೊಡ್ಡ ಪರೀಕ್ಷೆಯಾಗಲಿದೆ. ವಿಶ್ವಕಪ್‌ಗೆ ಆಯ್ಕೆಯಾಗಿದ್ದರೂ, ಟಿ20 ಸ್ಟಾರ್‌ನ ಏಕದಿನ ಸಾಮರ್ಥ್ಯದ ಬಗ್ಗೆ ಇನ್ನೂ ಅನುಮಾನಗಳಿವೆ. 27 ಏಕದಿನ ಪಂದ್ಯಗಳ ಸರಾಸರಿ 25ಕ್ಕಿಂತ ಕಡಿಮೆ ಆಗಿದೆ. ಇದು ಅವರ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ. ಅಂತಿಮವಾಗಿ ಪ್ರಕಟಗೊಳ್ಳುವ ವಿಶ್ವಕಪ್ ತಂಡದಲ್ಲಿ ಅವರು ಖಚಿತ ಸ್ಥಾನ ಹೊಂದಿಲ್ಲ. ಆದರೆ ಸೂರ್ಯ ತನ್ನನ್ನು ತಾನು ಸಾಬೀತುಪಡಿಸಲು ಮತ್ತು ವಿಶ್ವಕಪ್‌ಗೆ ತಾವೇ ಸರಿಯಾದ ಆಯ್ಕೆ ಎಂದು ತೋರಿಸಲು ಈ ಸರಣಿ ಉತ್ತಮ ಅವಕಾಶವಾಗಿದೆ.