ಬೆಂಗಳೂರು: ಕೊನೆಯ ಓವರ್ನಲ್ಲಿ 10 ರನ್ ಬೇಕಾಗಿದ್ದಾಗ ದಾಳಿಗೆ ಬಂದ ಅರ್ಶದೀಪ್ ಸಿಂಗ್ ಕ್ರೀಸ್ನಲ್ಲಿದ್ದ ಆಸೀಸ್ ನಾಯಕ ಮ್ಯಾಥ್ಯೂ ವೇಡ್ ವಿಕೆಟ್ ಮತ್ತು ಕೇವಲ ನಾಲ್ಕು ರನ್ ಬಿಟ್ಟುಕೊಟ್ಟರು. ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟಿ20 ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಭಾರತ ಈ ಪಂದ್ಯವನ್ನು 6 ರನ್ಗಳಿಂದ ಗೆದ್ದು ಸರಣಿಯನ್ನು 4-1 ರಿಂದ ವಶಪಡಿಸಿಕೊಂಡಿದೆ. 20 ಓವರ್ಗಳನ್ನು ಆಡಿದ ಆಸೀಸ್ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಶ್ರೇಯಸ್ ಅಯ್ಯರ್ (53) ಅರ್ಧಶತಕ, ಯಶಸ್ವಿ ಜೈಸ್ವಾಲ್ (21), ಅಕ್ಷರ್ ಪಟೇಲ್ (31) ಮತ್ತು ಜಿತೇಶ್ ಶರ್ಮಾ (24) ಅವರ ಇನ್ನಿಂಗ್ಸ್ನ ಸಹಾಯದಿಂದ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿತ್ತು. ಸರಣಿ ಸೋಲು ಕಂಡಿರುವ ವೇಡ್ ಪಡೆಯ ಗೆಲುವಿಗೆ 161 ರನ್ಗಳ ಅವಶ್ಯಕತೆ ಇತ್ತು.
ಈ ಗುರಿಯನ್ನು ಬೆನ್ನತ್ತಿದ ಆಸೀಸ್ ಮೊದಲ ಓವರ್ನಲ್ಲಿ ತನ್ನ ಬ್ಯಾಟಿಂಗ್ ಪ್ರಾಬಲ್ಯವನ್ನು ಮೆರೆಯಿತು. ಆರ್ಶದೀಪ್ ಸಿಂಗ್ ಅವರ ಮೊದಲ ಓವರ್ನಲ್ಲಿ 14 ರನ್ ಕಬಳಿಸಿದ ಆಸೀಸ್ ಆಟಗಾರರು ಮೇಲುಗೈ ಸಾಧಿಸಲು ಪ್ರಯತ್ನಿಸಿದರು. ಎರಡನೇ ಓವರ್ನಲ್ಲಿ ನಿಯಂತ್ರಣ ಸಾಧಿಸಿದ ಮುಖೇಶ್ ಕುಮಾರ್ ನಾಲ್ಕನೇ ಓವರ್ನಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆದರು. 4 ರನ್ ಗಳಿಸಿದ್ದ ಜೋಶ್ ಫಿಲಿಪ್ ಮುಖೇಶ್ ದಾಳಿಗೆ ಬಲಿಯಾದರು.
5ನೇ ಓವರ್ನಲ್ಲಿ ದಾಳಿಗೆ ಇಳಿದ ರವಿ ಬಿಷ್ಣೋಯಿ ಅಬ್ಬರಿಸಿದ್ದ ಇನ್ನೋರ್ವ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ (28) ಔಟ್ ಆದರು. ನಂತರ ಬಂದ ಟ್ರಾವಿಸ್ ಹೆಡ್ (6) ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಮತ್ತೊಮ್ಮೆ ಎಡವಿದರು. ಆದರೆ ಮೂರನೇ ವಿಕೆಟ್ಗೆ ಬಂದಿದ್ದ ಬೆನ್ ಮೆಕ್‌ಡರ್ಮಾಟ್ ಜೊತೆಗೆ ಟಿಮ್ ಡೇವಿಡ್ ಜೊತೆಯಾಟ ಬೆಳೆಸಿ ವಿಕೆಟ್ ನಿಲ್ಲಿಸಿದರು. ಈ ಜೋಡಿ 4 ವಿಕೆಟ್ಗೆ 47 ರನ್ಗಳ ಪಾಲುದಾರಿಕೆ ಹಂಚಿಕೊಂಡಿತು ಇದರಿಂದಾಗಿ ಭಾರತಕ್ಕೆ ಗೆಲುವಿನ ಹಾದಿ ಕಠಿಣವಾಯಿತು. 17 ರನ್ಗಳ ಸಾಥ್ ನೀಡಿದ್ದ ಟಿಮ್ ಡೇವಿಡ್ ಅಕ್ಷರ್ ಪಟೇಲ್ ಸ್ಪಿನ್ಗೆ ಬಲಿಯಾದರು.