ರಾಯಪುರ (ಛತ್ತೀಸ್‌ಗಢ): ವಿಶ್ವಕಪ್ ಟ್ರೋಫಿ ಗೆದ್ದು ಬೀಗಿದ ಆಸ್ಟ್ರೇಲಿಯಾ ಪಡೆ ಐಪಿಎಲ್ ಸ್ಟಾರ್ ಆಟಗಾರರ ತಂಡದ ಮುಂದೆ ಮಂಡಿಯೂರಿದ್ದು, ಒಂದು ಪಂದ್ಯ ಬಾಕಿ ಇರುವಂತೆ ಸರಣಿಯನ್ನು 3-1ರಿಂದ ಕಳೆದುಕೊಂಡಿದೆ. ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯವನ್ನು ಭಾರತ 20 ರನ್ಗಳಿಂದ ಗೆದ್ದು ಸರಣಿ ತನ್ನದಾಗಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ರಿಂಕು ಸಿಂಗ್ (46), ಯಶಸ್ವಿ ಜೈಸ್ವಾಲ್ (37), ಜಿತೇಶ್ ಶರ್ಮಾ (35) ಮತ್ತು ರುತುರಾಜ್ ಗಾಯಕ್ವಾಡ್ (32) ಅವರ ಬ್ಯಾಟಿಂಗ್ ನೆರವಿನಿಂದ ನಿಗದಿತ ಓವರ್ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 175 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತು.
ಗುರಿ ಬೆನ್ನಟ್ಟಿದ ಆಸೀಸ್ ಪಡೆ ಉತ್ತಮ ಆರಂಭವನ್ನೇನೋ ಪಡೆಯಿತು. ಆದರೆ ಭಾರತೀಯ ಸ್ಪಿನ್ ದಾಳಿಯ ಮುಂದೆ ಮಂಕಾಯಿತು. ನಾಯಕ ಸೂರ್ಯಕುಮಾರ್ ಯಾದವ್ ಪವರ್ ಪ್ಲೇ ವೇಳೆಯೇ ಸ್ಪಿನ್ನರ್ಗಳಿಗೆ ಬೌಲಿಂಗ್ ನೀಡಿ ಪ್ರಯೋಗಕ್ಕೆ ಮುಂದಾದರು ಮತ್ತು ಯಶಸ್ಸು ಕಂಡರು. 4ನೇ ಓವರ್ಗೆ ದಾಳಿಗೆ ಬಂದ ರವಿ ಬಿಷ್ಣೋಯ್ ಆರಂಭಿಕ ಜೋಶ್ ಫಿಲಿಪ್ ವಿಕೆಟ್ ಉರಿಳಿಸಿದರು. ಅಲ್ಲದೇ ಆ ಓವರ್ನಲ್ಲಿ ಕೇವಲ 2 ರನ್ ಬಿಟ್ಟುಕೊಟ್ಟು ನಿಯಂತ್ರಣ ಸಾಧಿಸಿದರು. 5ನೇ ಓವರ್ ಮಾಡಿದ ಅಕ್ಷರ್ 3 ರನ್ ಕೊಟ್ಟರೆ, ಪವರ್ ಪ್ಲೇಯ ಕೊನೆ ಓವರ್ ಮಾಡಿದ ರವಿ 7 ರನ್ ಕೊಟ್ಟು ಬಿರುಸಿನಿಂದ ಆಡುತ್ತಿದ್ದ ಆಸೀಸ್ ವೇಗಕ್ಕೆ ಕಡಿವಾಣ ಹಾಕಿದರು.