ಮುಂಬೈ:ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ಸೋಂಕಿನಿಂದಾಗಿ ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಕಾರ್ಮೋಡ ಮೂಡಿತ್ತು. ಆದರೆ, ಭಾರತೀಯ ಕ್ರಿಕೆಟ್ ಮಂಡಳಿ ಇದಕ್ಕೆ ತೆರೆ ಎಳೆದಿದ್ದು, ಟೂರ್ನಿ ನಡೆಯುವುದು ಖಚಿತಗೊಳಿಸಿದೆ.
ಡಿಸೆಂಬರ್ 9ರಂದು ಭಾರತೀಯ ತಂಡ ಹರಿಣಗಳ ನಾಡಿಗೆ ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗಲು ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ, ಇದೀಗ ವೇಳಾಪಟ್ಟಿ ಮರು ನಿಗದಿಯಾಗಿದೆ. ಡಿಸೆಂಬರ್ 26ರಿಂದ ಉಭಯ ತಂಡಗಳ ನಡುವೆ ಏಕದಿನ ಸರಣಿ ಆರಂಭಗೊಳ್ಳಲಿದೆ.
ಭಾರತೀಯ ಕ್ರಿಕೆಟ್ ಮಂಡಳಿಯಿಂದ ಇಂದು ನಡೆದ 90ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 26 ರಿಂದ ಭಾರತ-ದಕ್ಷಿಣ ಆಫ್ರಿಕಾ ತಂಡ ಮೂರು ಟೆಸ್ಟ್ ಪಂದ್ಯ ಹಾಗೂ ತದನಂತರ ಮೂರು ಏಕದಿನ ಪಂದ್ಯಗಳಲ್ಲಿ ಭಾಗಿಯಾಗಲಿದ್ದು, ಟಿ -20 ಟೂರ್ನಿಯ ವೇಳಾಪಟ್ಟಿ ತದನಂತರ ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಸಿಸಿಐ ಪ್ರಕಟಣೆ ಹೊರಡಿಸುವುದಕ್ಕೂ ಕೆಲ ಗಂಟೆಗಳ ಮುಂಚಿತವಾಗಿ ಟ್ವೀಟ್ ಮಾಡಿದ್ದ ಕ್ರಿಕೆಟ್ ಸೌತ್ ಆಫ್ರಿಕಾ, ಉಭಯ ತಂಡಗಳ ನಡುವೆ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಟೀಂ ಇಂಡಿಯಾ ಒಂದು ವಾರ ತಡವಾಗಿ ಇಲ್ಲಿಗೆ ಬರಲಿದೆ ಎಂದು ತಿಳಿಸಿದೆ. ಜೊತೆಗೆ ಜನವರಿ ತಿಂಗಳಲ್ಲಿ ಟಿ - 20 ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿ ಸಿದ್ಧಗೊಳ್ಳಲಿದೆ ಎಂದಿದೆ.