ಮೆಲ್ಬೋರ್ನ್:ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಾಳೆ (ಡಿ.26) ಬೆಳಿಗ್ಗೆ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕಾಗಿ ಭಾರತವು ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಭಾರತ, ಈ ಮೂಲಕ ಪುಟಿದೇಳಲು ಎದುರು ನೋಡುತ್ತಿದೆ.
ಈಗಾಗಲೇ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದಲ್ಲಿದೆ. ಎರಡನೇ ಪಂದ್ಯದಲ್ಲೂ ಭಾರತವನ್ನು ಮಣಿಸಿ ಸರಣಿಯ ಮೇಲೆ ಹಿಡಿತ ಸಾಧಿಸಲು ಆಸೀಸ್ ಕಣ್ಣಿಟ್ಟಿದೆ. ಆದರೆ, ಈ ಪಂದ್ಯದಲ್ಲಾದರೂ ಗೆದ್ದು ಸೋಲಿನ ಮುಖಭಂಗ ಉಳಿಸಿಕೊಳ್ಳಲು ಭಾರತ ಕಾಯುತ್ತಿದೆ. ಇತ್ತ ಭಾರತ ತಂಡದಲ್ಲಿ ನಾಲ್ಕು ಬದಲಾವಣೆ ಮಾಡಿದ್ದರೆ, ಆಸ್ಟ್ರೇಲಿಯಾ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಮುನ್ನೆಡಸಲಿದೆ.
ನಾಳೆಯ ಪಂದ್ಯಕ್ಕೆ ಇಂದು ಪ್ರಕಟಿಸಿರುವ ಆಡುವ 11ರ ಬಳಗದಲ್ಲಿ ಶುಭ್ಮನ್ ಗಿಲ್, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ತಂಡಕ್ಕೆ ಸೇರಿಕೊಂಡಿದ್ದು, ಕಾಂಗರೂಗಳ ವಿರುದ್ಧ ಕಾದಾಡಲು ಅಜಿಂಕ್ಯಾ ರಹಾನೆ ಪಡೆ ತುದಿಗಾಲಲ್ಲಿ ನಿಂತಿದೆ. ಅಲ್ಲದೇ, ಗಿಲ್ ಮತ್ತು ಸಿರಾಜ್ ಕೂಡ ಪದಾರ್ಪಣೆಗೆ ಸಜ್ಜಾಗಿದ್ದಾರೆ.
ಗಿಲ್, ಸಿರಾಜ್ ಪದಾರ್ಪಣೆ: ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಪೃಥ್ವಿ ಶಾ ರನ್ ಕದಿಯಲು ತಿಣುಕಾಡಿದರು. ಮೊದಲ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ, ಎರಡನೇ ಇನ್ನಿಂಗ್ಸ್ನಲ್ಲಿ 4 ರನ್ಗಳಿಸಿ ವೈಫಲ್ಯ ಕಂಡಿದ್ದರು. ಇದು ತಂಡಕ್ಕೂ ಒತ್ತಡ ತಂದಿತು. ಹೀಗಾಗಿ, ಶಾ ಬದಲಿಗೆ ಶುಭ್ಮನ್ ಗಿಲ್ ಅವರು, ಮಯಾಂಕ್ ಅಗರ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಈ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಲಿರುವ ಗಿಲ್ ಕನಸು ನಾಳೆ ನನಸಾಗಲಿದೆ.
ತಂದೆ ಮರಣದ ನಂತರ ಅಂತಿಮ ದರ್ಶನಕ್ಕೂ ಬರಲಾಗದೇ ಆಸೀಸ್ ನೆಲದಲ್ಲೇ ಉಳಿದುಕೊಂಡಿದ್ದ ಮೊಹಮ್ಮದ್ ಸಿರಾಜ್ ನಾಳೆ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಏಕದಿನ ಮತ್ತು ಟಿ-20 ಸರಣಿಗೆ ಅವಕಾಶ ದೊರೆಯಲಿಲ್ಲ. ಸದ್ಯ ಅವಕಾಶ ದೊರೆತಿದ್ದು, ಮಿಂಚಲಿದ್ದಾರೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. ಮೊಹಮ್ಮದ್ ಶಮಿ ಸ್ಥಾನವನ್ನು ತುಂಬಲಿದ್ದಾರೆ.
ರಿಷಭ್ ಪಂತ್ ಆಗಮನ:ಎರಡನೇ ಅಭ್ಯಾಸ ಪಂದ್ಯದಲ್ಲಿ ಕಡಿಮೆ ಎಸೆತಗಳಿಗೆ ಭರ್ಜರಿ ಶತಕ ಬಾರಿಸಿದ್ದ ವಿಕೆಟ್ ಕೀಪರ್ ರಿಷಭ್ ಪಂತ್ ತಂಡ ಸೇರಿಕೊಂಡಿದ್ದು, ವೃದ್ಧಿಮಾನ್ ಸಹಾ ಬೆಂಚ್ ಕಾಯಲಿದ್ದಾರೆ. ಅಲ್ಲದೆ, ಮೊದಲ ಪಂದ್ಯದಲ್ಲಿ ಸಾಹಾ ಹೇಳಿಕೊಳ್ಳುವಷ್ಟು ಪ್ರದರ್ಶನ ತೋರಲಿಲ್ಲ. ಹೀಗಾಗಿ, ಪಂತ್ ತಂಡ ಸೇರಿಕೊಂಡಿದ್ದಾರೆ.
ತಂಡ ಸೇರಿಕೊಂಡ ಜಡ್ಡು:ಗುರುವಾರ ಸಂಜೆ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಕಾರಣ ರವೀಂದ್ರ ಜಡೇಜಾ ಬಾಕ್ಸಿಂಗ್ ಡೇ ಟೆಸ್ಟ್ಗಾಗಿ ಆಡುವ 11ರ ತಂಡಕ್ಕೆ ಮರಳಲಿದ್ದಾರೆ. ಆಲ್‌ರೌಂಡರ್ ಜಡೇಜಾ 7 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ. ಜಡ್ಡು ಆಗಮನದಿಂದ ಬೌಲಿಂಗ್ ಬಲ ಹೆಚ್ಚಾಗಿದೆ. ಅಲ್ಲದೇ, ಪಿತೃತ್ವ ರಜೆ ಪಡೆದು ಭಾರತಕ್ಕೆ ಮರಳಿರುವ ವಿರಾಟ್ ಕೊಹ್ಲಿ ಬದಲಿಗೆ ಜಡ್ಡು ತಂಡ ಸೇರಿಕೊಂಡಿದ್ದಾರೆ.
ಭಾರತಕ್ಕೆ ಕೊಹ್ಲಿ ಅನುಪಸ್ಥಿತಿ, ರಾಹುಲ್ಗಿಲ್ಲ ಅವಕಾಶ:ಪಿತೃತ್ವ ರಜೆಯಲ್ಲಿ ಭಾರತಕ್ಕೆ ಬಂದಿರುವ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಬದಲಿಗೆ ಕನ್ನಡಿಗ ಕೆ.ಎಲ್.ರಾಹುಲ್ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ, ರಾಹುಲ್ಗೆ ಅವಕಾಶ ನೀಡದೇ ಜಡೇಜಾಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅಲ್ಲದೇ, ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.
ಸೋಲಿನ ಸೇಡು ತೀರಿಸಿಕೊಳ್ಳುತ್ತಾ?:ಮೊದಲ ಪಂದ್ಯದಲ್ಲಿ ತೀವ್ರ ಕಳಪೆ ಪ್ರದರ್ಶನ ತೋರಿದ ಭಾರತದ ಆಟಗಾರರು, ಸೋಲಿನ ಸೇಡು ತೀರಿಸಿಕೊಳ್ಳಲು ನಿರಂತರ ಅಭ್ಯಾಸದಲ್ಲಿ ತೊಡಗಿದ್ದಾರೆ. ಭಾರತವು ಎರಡನೇ ಇನ್ನಿಂಗ್ಸ್ ಕೇವಲ 36 ಗಳಿಸಿ ಅತ್ಯಂತ ಕೆಟ್ಟ ದಾಖಲೆ ಬರೆದಿತ್ತು. ಮೊದಲ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ 53 ರನ್‌ಗಳ ಮುನ್ನಡೆ ಗಳಿಸಿತ್ತು. ಆದರೆ, ಎಂಟು ವಿಕೆಟ್‌ಗಳಿಂದ ಸೋತಿತು. ಆಸ್ಟ್ರೇಲಿಯಾ ತಂಟವು ಮೊದಲ ಟೆಸ್ಟ್ ತಂಡದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಂಡಿದೆ.
ಆಡುವ 11ರ ಬಳಗ:ಅಜಿಂಕ್ಯಾ ರಹಾನೆ (ನಾಯಕ), ಚೇತೇಶ್ವರ ಪೂಜಾರ (ಉಪನಾಯಕ), ಶುಭ್ಮನ್ ಗಿಲ್ (ಪದಾರ್ಪಣೆ), ಮಾಯಾಂಕ್ ಅಗರ್ವಾಲ್, ಹನುಮ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ (ಪದಾರ್ಪಣೆ), ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್, ಜಸ್ಪ್ರಿತ್ ಬೂಮ್ರಾ.