ತರೌಬಾ(ವೆಸ್ಟ್ಇಂಡೀಸ್) :ವಿಶ್ವಕಪ್ಗೆ ಸಿದ್ಧತಾ ಭಾಗವಾಗಿ ಹಲವು ಪ್ರಯೋಗಗಳ ನಡುವೆ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು 2-1 ರಿಂದ ಕೈವಶ ಮಾಡಿಕೊಂಡಿತು. ಆತಿಥೇಯರ ವಿರುದ್ಧದ 3ನೇ, ಅಂತಿಮ ಏಕದಿನ ಪಂದ್ಯದಲ್ಲಿ 200 ರನ್ ಅಂತರದ ಜಯ ದಾಖಲಿಸಿತು. ಇದು ವಿಂಡೀಸ್ ವಿರುದ್ಧದ 13ನೇ ಸರಣಿ ಗೆಲುವಾಗಿದೆ.
ಮಂಗಳವಾರ ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಪೂರ್ಣ ಪ್ರಾಬಲ್ಯ ಮೆರೆದ ಭಾರತೀಯರು ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ರಾರಾಜಿಸಿದರು. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಓವರ್ನಲ್ಲಿ 5 ವಿಕೆಟ್ಗೆ 351 ರನ್ ಗಳಿಸಿದರು. ಪ್ರತ್ಯುತ್ತರವಾಗಿ ವಿಂಡೀಸ್ ಸೊಲ್ಲೆತ್ತದೇ 151 ರನ್ ಗಳಿಸಿ ಶರಣಾಯಿತು.
ಕೊನೆಯ ಪಂದ್ಯದಲ್ಲೂ ಪ್ರಯೋಗ ಮುಂದುವರಿಸಿದ ಭಾರತ ತಂಡ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನು ಹೊರಗಿಟ್ಟು, ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ವಾಡ್ಗೆ ಅವಕಾಶ ನೀಡಲಾಯಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಯುವಪಡೆ ವಿಂಡೀಸ್ ವಿರುದ್ಧ ಬ್ಯಾಟಿಂಗ್ ಪರಾಕ್ರಮ ತೋರಿತು.
ಆರಂಭಿಕ ಜೋಡಿಯಾದ ಇಶಾನ್ ಕಿಶನ್, ಶುಭ್ಮನ್ಗಿಲ್ ಭರ್ಜರಿ ಬ್ಯಾಟ್ ಮಾಡಿ ಮೊದಲ ವಿಕೆಟ್ಗೆ 143 ರನ್ ಪೇರಿಸಿತು. ಈ ಪಂದ್ಯದಲ್ಲೂ ಅಬ್ಬರಿಸಿದ ಕಿಶನ್ 64 ಎಸೆತಗಳಲ್ಲಿ 77 ರನ್ ಬಾರಿಸಿ ಸರಣಿಯಲ್ಲಿ ಸತತ ಮೂರನೇ ಅರ್ಧಶತಕ ಬಾರಿಸಿದರು. ಇನ್ನೊಂದು ತುದಿಯಲ್ಲಿ ಗಿಲ್ ಕೂಡ ಉತ್ತಮ ಬ್ಯಾಟ್ ಮಾಡಿ 85 ರನ್ ಗಳಿಸಿದರು. ಋತುರಾಜ್ ಗಾಯಕ್ವಾಡ್ 8 ರನ್ಗೆ ಔಟಾಗಿ ನಿರಾಸೆ ಮೂಡಿಸಿದರು.
ಮಿಂಚಿದ ಸ್ಯಾಮ್;ಪ್ರತಿಭೆ ಇದ್ದರೂ ಅವಕಾಶ ವಂಚಿತವಾಗಿದ್ದ ಸಂಜು ಸ್ಯಾಮ್ಸನ್ ಕಳೆದ ಪಂದ್ಯದಲ್ಲಿ ಮಂಕಾಗಿದ್ದರೂ, ಇಲ್ಲಿ ಅಬ್ಬರಿಸಿದರು. ಟಿ-20 ಮಾದರಿಯಲ್ಲಿ ಬ್ಯಾಟ್ ಮಾಡಿದ ಸಂಜು 4 ಸಿಕ್ಸರ್, 2 ಬೌಂಡರಿ ಸಮೇತ 51 ರನ್ ಬಾರಿಸಿದರು. ಆರಂಭದಿಂದಲೇ ರನ್ ಗಳಿಕೆಗೆ ಒತ್ತು ನೀಡಿ ರಭಸವಾಗಿ ಬ್ಯಾಟ್ ಮಾಡಿದರು. ಇನ್ನು ಸತತ ವೈಫಲ್ಯ ಕಾಣುತ್ತಿದ್ದ ಹಾರ್ದಿಕ್ ಪಾಂಡ್ಯ ಚೇತರಿಕೆ ಆಟವಾಡಿದರು.
ಆರಂಭದಲ್ಲಿ ತಿಣುಕಾಡಿದರೂ ಲಯ ಕಂಡುಕೊಂಡು ಕೊನೆಯಲ್ಲಿ ಸ್ಫೋಟಿಸಿ 52 ಎಸೆತಗಳಲ್ಲಿ 70 ರನ್ ಪೇರಿಸಿದರು. 5 ಸಿಕ್ಸರ್, 4 ಬೌಂಡರಿ ಬಾರಿಸಿದರು. ಸೂರ್ಯಕುಮಾರ್ ಯಾದವ್ 35 ರನ್ ಮಾಡಿದರು. ಕೊನೆಗೆ ಭಾರತ 351 ರನ್ಗಳ ಗುರಿ ನೀಡಿತು.
ವಿಂಡೀಸ್ ಉಡೀಸ್;ದೊಡ್ಡ ಮೊತ್ತ ಬೆನ್ನಟ್ಟಿದ ವಿಂಡೀಸ್ ಭಾರತದ ಬೌಲರ್ಗಳನ್ನು ಎದುರಿಸಲಾಗದೇ ಪೆವಿಲಿಯನ್ ಪರೇಡ್ ನಡೆಸಿದರು. ಅಲಿಕ್ ಅಥಾಂಜೆ 32, ಸ್ಪಿನ್ನರ್ ಗುಡಕೇಶ್ ಮೋಟಿ 39, ಅಲ್ಜಾರಿ ಜೋಸೆಫ್ 26, ಯನ್ನಿಕ್ ಕಾರಿಯಾ 19 ರನ್ ಗಳಿಸಿದರೆ, ಉಳಿದವರು ಒಂದಂಕಿ ದಾಟಲಿಲ್ಲ. ಇದರಿಂದ ತಂಡ 35.3 ಓವರ್ಗಳಲ್ಲಿ 151 ರನ್ಗೆ ಗಂಟುಮೂಟೆ ಕಟ್ಟಿತು. ಮಾರಕ ದಾಳಿ ನಡೆಸಿದ ಶಾರ್ದೂಲ್ ಠಾಕೂರ್ 4, ಮುಕೇಶ್ ಕುಮಾರ್ 3, ಕುಲದೀಪ್ ಯಾದವ್ 2 ವಿಕೆಟ್ ಕಿತ್ತು ವಿಂಡೀಸ್ ಸಂಹಾರ ಮಾಡಿದರು.
ಸತತ 13 ನೇ ಸರಣಿ ಗೆಲುವು:ಕೆರೆಬಿಯನ್ನರ ವಿರುದ್ಧ ಭಾರತ ಎರಡನೇ ಅತ್ಯಧಿಕ(200) ರನ್ ಗೆಲುವು ದಾಖಲಿಸುವ ಮೂಲಕ ಸತತ 13ನೇ ಸರಣಿ ಗೆಲುವು ಸಾಧಿಸಿತು. 2007 ರಿಂದ ವಿಂಡೀಸ್ ವಿರುದ್ಧ ಭಾರತ ತವರು, ತವರಿನಾಚೆ ಎಲ್ಲೂ ಸರಣಿ ಸೋತಿಲ್ಲ.
ಇದನ್ನೂ ಓದಿ:Ravindra Jadeja: ತಂಡದಲ್ಲಿ ಯಾರಿಗೂ ಅಹಂಕಾರ ಇಲ್ಲ.. ಮಾಜಿ ಆಟಗಾರರಿಗೆ ತಂಡದ ಬಗ್ಗೆ ಮಾತನಾಡುವ ಅಧಿಕಾರ ಇದೆ: ಜಡೇಜ