ದುಬೈ :ಮಳೆಯ ಕಾರಣ ಡ್ರಾನಲ್ಲಿ ಅಂತ್ಯಗೊಂಡಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಎರಡೂ ತಂಡಗಳಿಗೆ ಪಂದ್ಯದ ಸಂಭಾವನೆಯ ಶೇ.40ರಷ್ಟು ದಂಡವಾಗಿ ವಿಧಿಸಲಾಗಿದೆ. ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳಿಂದ ತಲಾ 2 ಅಂಕಗಳನ್ನು ಕಡಿತಗೊಳಿಸಲಾಗಿದೆ.
ಪಂದ್ಯದ ರೆಫ್ರಿ ಕ್ರಿಸ್ ಬ್ರಾಡ್ ನಿಗದಿಪಡಿಸಿದ ಸಮಯದಲ್ಲಿ 2 ಓವರ್ಗಳನ್ನು ತಡವಾಗಿ ಮಾಡಿದ್ದಕ್ಕೆ ಎರಡು ತಂಡಗಳಿಗೂ ದಂಡ ವಿಧಿಸಿದ್ದಾರೆ. ಐಸಿಸಿ ಆರ್ಟಿಕಲ್ 2.22ರ ಪ್ರಕಾರ, ಟೆಸ್ಟ್ ಪಂದ್ಯದಲ್ಲಿ ಒಂದು ಓವರ್ ತಡವಾಗಿ ಬೌಲಿಂಗ್ ಮಾಡಿದರೆ ಕನಿಷ್ಠ ಓವರ್ ದರಕ್ಕೆ ಶಿಕ್ಷೆಯಾಗಿ ಎಲ್ಲಾ ಆಟಗಾರರು ಪಂದ್ಯ ಶುಲ್ಕದ ಶೇ.20ರಷ್ಟು ದಂಡ ಪಾವತಿಸಬೇಕಾಗುತ್ತದೆ.