ದುಬೈ: ರೋಹಿತ್ ಶರ್ಮಾ ಅರ್ಧಶತಕ ಮತ್ತು ಬೌಲರ್ಗಳ ಅಮೋಘ ಪ್ರದರ್ಶನದ ನೆರವಿನಿಂದ ಭಾರತ ತಂಡ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಆಸ್ಟ್ರೇಲಿಯಾ ನೀಡಿದ್ದ 153 ರನ್ಗಳ ಸಾಧಾರಣ ಗುರಿಯನ್ನು ಭಾರತ ತಂಡ ಕೇವಲ 2 ವಿಕೆಟ್ ಕಳೆದುಕೊಂಡು ತಲುಪಿತು. ಆರಂಭಿಕ ರಾಹುಲ್ 31 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 39ರನ್ಗಳಿಸಿ ಆಷ್ಟನ್ ಅಗರ್ಗೆ ವಿಕೆಟ್ ಒಪ್ಪಿಸಿದರು.
ನಾಯಕ ರೋಹಿತ್ ಶರ್ಮಾ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 60 ರನ್ಗಳಿಸಿ ನಿವೃತ್ತಿ ತೆಗೆದುಕೊಂಡರು. ಸೂರ್ಯಕುಮಾರ್ ಯಾದವ್ 27 ಎಸೆತಗಳಲ್ಲಿ ಅಜೇಯ 38 ಮತ್ತು ಹಾರ್ದಿಕ್ ಪಾಂಡ್ಯ ಅಜೇಯ 14 ರನ್ಗಳಿಸಿ ಇನ್ನು 13 ಎಸೆತಗಳಿರುವಂತೆ ಭಾರತಕ್ಕೆ ಗೆಲುವು ತಂದುಕೊಟ್ಟರು.
ಇದಕ್ಕು ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಆರಂಭಿಕ ಆಘಾತದ ನಡುವೆಯೂ 152 ರನ್ಗಳಿಸಿತ್ತು. ಸ್ಟೀವ್ ಸ್ಮಿತ್ 57, ಮಾರ್ಕಸ್ ಸ್ಟೋಯ್ನಿಸ್ 41 ಮತ್ತು ಮ್ಯಾಕ್ಸ್ವೆಲ್ 37 ರನ್ಗಳಿಸಿದ್ದರು.
ಭಾರತದ ಪರ ಆರ್ ಅಶ್ವಿನ್ 2 ಓವರ್ಗಳಲ್ಲಿ 8 ರನ್ ನೀಡಿ 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ 27ಕ್ಕೆ1, ಜಡೇಜಾ 35ಕ್ಕೆ 1 ಮತ್ತು ರಾಹುಲ್ ಚಹರ್ 17ಕ್ಕೆ1 ವಿಕೆಟ್ ಪಡೆದರು.
ಭಾರತ ತಂಡ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸಿತ್ತು. ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ವಿಶ್ವಕಪ್ ಅಭಿಯಾನ ಆರಂಭಿಸಲಿರುವ ಕೊಹ್ಲಿ ಪಡೆಗೆ ಅಭ್ಯಾಸ ಪಂದ್ಯಗಳ ಈ ಎರಡು ಜಯ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.
ಇದನ್ನು ಓದಿ:ಧೋನಿ ತಂಡದಲ್ಲಿರುವುದನ್ನ ಇಷ್ಟಪಡುತ್ತೇವೆ, ಅವರ ಪ್ರತಿ ಸಲಹೆ ಬಳಸಿಕೊಳ್ಳುತ್ತೇವೆ: ಕೆ. ಎಲ್. ರಾಹುಲ್