ರೋಸೌ (ಡೊಮಿನಿಕಾ): ಇಂದಿನಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಉದಯೋನ್ಮುಖ ಪ್ರತಿಭೆ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿಯುವುದನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಖಚಿತಪಡಿಸಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ರುತುವಿನ ಮೊದಲ ಟೆಸ್ಟ್‌ನಲ್ಲಿ ಭಾರತ ಹೊಸ ಆರಂಭಿಕ ಸಂಯೋಜನೆಗೆ ಒತ್ತು ನೀಡಿದೆ. ಹೀಗಾಗಿ, ಹಿಟ್‌ಮ್ಯಾನ್ ಶರ್ಮಾ ಜೊತೆಗೆ 21 ವರ್ಷದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಪಂದ್ಯಾರಂಭ ಮಾಡುವರು.
ಜೈಸ್ವಾಲ್‌ರಿಗೆ ಈ ವರ್ಷ ವೈಟ್ ಬಾಲ್ ಕ್ರಿಕೆಟ್ ಭಾರಿ ಯಶಸ್ಸು ತಂದುಕೊಟ್ಟಿದೆ. 2023ರ ಐಪಿಎಲ್‌ನಲ್ಲಿ 48ರ ಸರಾಸರಿಯಲ್ಲಿ 163.61 ಸ್ಟ್ರೈಕ್ ರೇಟ್‌ನೊಂದಿಗೆ ಅವರು 625 ರನ್‌ಗಳನ್ನು ಗಳಿಸಿದರೆ, 26 ಪ್ರಥಮ ದರ್ಜೆ ಇನ್ನಿಂಗ್ಸ್‌ಗಳಲ್ಲಿ 80ಕ್ಕಿಂತ ಹೆಚ್ಚು ಸರಾಸರಿ ಬ್ಯಾಟ್ ಬೀಸಿದ್ದಾರೆ. ಜೈಸ್ವಾಲ್ ಕಳೆದ ವರ್ಷ ದುಲೀಪ್ ಟ್ರೋಫಿ ಫೈನಲ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 265 ರನ್ ಗಳಿಸುವ ಮೂಲಕ ರೆಡ್ ಬಾಲ್ ಕ್ರಿಕೆಟ್‌ನ ಸಾಮರ್ಥ್ಯ ತೋರಿದ್ದರು. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಅವರು ಆಯ್ಕೆ ಆಗಿಲ್ಲ. ಅವರ ಜಾಗದಲ್ಲಿ ಈ ಮೊದಲು ರೋಹಿತ್ ಜೊತೆಗೆ ಓಪನರ್ ಆಗಿದ್ದ ಶುಭಮನ್ ಗಿಲ್ ಆಡಲಿದ್ದಾರೆ.
ಮೊದಲ ಟೆಸ್ಟ್‌ಗೂ ಮುಂಚಿತವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಂಡಿಯನ್ ಕ್ಯಾಪ್ಟನ್, "ಗಿಲ್ ಅವರು 3ನೇ ಕ್ರಮಾಂಕದಲ್ಲಿ ಆಡುತ್ತಾರೆ. ಏಕೆಂದರೆ ಗಿಲ್ ಸ್ವತಃ 3ನೇ ಕ್ರಮಾಂಕದಲ್ಲಿ ಆಡಲು ಬಯಸಿದ್ದಾರೆ. ನಾನು ನನ್ನೆಲ್ಲ ಕ್ರಿಕೆಟ್‌ಗಳನ್ನು 3 ಮತ್ತು 4ರಲ್ಲಿ ಆಡಿದ್ದೇನೆ ಎಂದು ಗಿಲ್ ರಾಹುಲ್ ದ್ರಾವಿಡ್ ಜೊತೆ ಚರ್ಚಿಸಿದ್ದಾರೆ. ನಾನು 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ ತಂಡಕ್ಕೆ ಉತ್ತಮ ಪ್ರದರ್ಶನ ನೀಡಬಹುದೆಂದು ಭಾವಿಸುತ್ತೇನೆ. ಆರಂಭದಲ್ಲಿ ಎಡ ಮತ್ತು ಬಲ ಸಂಯೋಜನೆಗೆ ಸಹಕಾರಿ ಆಗಲಿದೆ ಎಂದು ಸಲಹೆ ನೀಡಿದ್ದಾರೆ" ಎಂದು ತಿಳಿಸಿದರು.