ಕೊಲಂಬೊ: ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ಪಡೆದಿರುವ ಕರ್ನಾಟಕದ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಮತ್ತು ಆಲ್ರೌಂಡರ್ ಕೆ ಗೌತಮ್ ಭಾರತದ ಜರ್ಸಿಯಲ್ಲಿ ಮಿಂಚಿದ್ದಾರೆ. ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಮೊದಲು ಬಿಸಿಸಿಐ ಫೋಟೋ ಶೂಟ್‌ನ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಬುಮ್ರಾ, ಕೆ ಎಲ್ ರಾಹುಲ್‌ರಂತಹ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಐಪಿಎಲ್ನಲ್ಲಿ ಮಿಂಚಿದ್ದ ಯುವ ಆಟಗಾರರನ್ನೊಳಗೊಂಡ ವೈಟ್ ಬಾಲ್ ತಂಡವನ್ನು ಲಂಕಾ ಪ್ರವಾಸಕ್ಕೆ ಕಳುಹಿಸಲಾಗಿದೆ. ಈ ತಂಡಕ್ಕೆ ಶಿಖರ್ ಧವನ್ ನಾಯಕ, ಭುವನೇಶ್ವರ್ ಕುಮಾರ್ ಉಪನಾಯಕ ಮತ್ತು ಕನ್ನಡಿಗ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಅಂಡರ್ 19, ಕೆಪಿಎಲ್, ಕರ್ನಾಟಕ ತಂಡದಲ್ಲಿ ರನ್ಗಳ ಸುರಿಮಳೆ ಸುರಿಸಿದ್ದ ದೇವದತ್ ಪಡಿಕ್ಕಲ್ ಕಳೆದ ಆವೃತ್ತಿಯಲ್ಲಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದರು. ಅವರು 2020ರ ಆವೃತ್ತಿಯಲ್ಲಿ 15 ಪಂದ್ಯಗಳಿಂದ 473 ರನ್ಗಳಿಸಿ ಆರ್ಸಿಬಿ ತಂಡದ ಗರಿಷ್ಠ ಸ್ಕೋರರ್ ಎನಿಸಿದ್ದರು.