ಓವೆಲ್ (ಲಂಡನ್): ಭಾರತಕ್ಕೆ 2013ರ ನಂತರ ಯಾವುದೇ ಐಸಿಸಿ ಟ್ರೋಫಿಯುನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. 10 ವರ್ಷಗಳ ನಂತರ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಗೆಲುವಿಗೆ ಭಾರತ ಹಂಬಲಿಸಿತ್ತು. ಆದರೆ ಬ್ಯಾಟಿಂಗ್ ವೈಫಲ್ಯದಿಂದ ಟೀಂ ಇಂಡಿಯಾ ಸೋಲನ್ನು ಕಂಡಿದೆ.
ಸೋಲಿನ ಬಗ್ಗೆ ಮಾತನಾಡಿದ ಭಾರತ ಮುಖ್ಯ ಕೋಚ್ ರಾಹುಲ್ ದ್ರಾವಿಡ್, "ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಂಡು 469 ರನ್ ಬಿಟ್ಟುಕೊಟ್ಟದ್ದು ದುಬಾರಿಯಾಯಿತು. ಅದನ್ನು ನಿಯಂತ್ರಿಸುವಲ್ಲಿ ಎಡವಿದೆವು. ಆದರೆ ಭಾರತದಿಂದ ಕೈ ತಪ್ಪಿದೆ ಎಂದು ಅನಿಸುತ್ತಿದ್ದ ಕ್ಷಣಗಳು ಬದಲಾಗಿದ್ದವು. ರಹಾನೆ ಮತ್ತು ಶಾರ್ದೂಲ್ ಉತ್ತಮ ರನ್ ಕಲೆಹಾಕಿ ಭಾರತಕ್ಕೆ ಆಧಾರವಾಗಿದ್ದರು. ಇದರಿಂದ ಗೆಲುವಿನ ಸಾಧ್ಯತೆ ನಮ್ಮ ಕಡೆಯೂ ಹೆಚ್ಚಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ನಿನ್ನೆ ವಿಕೆಟ್ ಕಳೆದುಕೊಂಡರೂ ಇಂದೂ ಗೆಲುವಿನ ಸಾಧ್ಯತೆಯ ಲೆಕ್ಕಾಚಾರ ನಮ್ಮಲ್ಲಿತ್ತು. ಇಂದು ನಮ್ಮ ತಂಡದಲ್ಲಿ ಬ್ಯಾಟರ್ಗಳು ಇದ್ದರು. ಅವರ ಮೇಲೆ ಭರವಸೆ ಇತ್ತು. ಆದರೆ ಕೆಲವು ಶಾಟ್ಗಳು ನಮ್ಮಿಂದ ಗೆಲುವನ್ನು ಕಸಿದುಕೊಂಡಿತು ಎಂದರೆ ತಪ್ಪಾಗದು" ಎಂದಿದ್ದಾರೆ.
ಟೈಟ್ ಶೆಡ್ಯೂಲ್ ಬಗ್ಗೆ ಮಾತನಾಡಿದ ದ್ರಾವಿಡ್, "ಇಂತಹ ಪಂದ್ಯಗಳನ್ನು ಆಡುವಾಗ ಮೂರು ವಾರಗಳ ಅಭ್ಯಾಸವನ್ನಾದರೂ ಮಾಡಲು ಅವಕಾಶ ಸಿಕ್ಕರೆ ತಂಡಕ್ಕೆ ಸಹಾಯ ಆಗುತ್ತದೆ. ಆದರೆ ಇದನ್ನು ನಾವು ದೂರಲು ಸಾಧ್ಯವಿಲ್ಲ. ಆಸ್ಟ್ರೇಲಿಯಾ ತುಂಬಾ ಚೆನ್ನಾಗಿ ಆಡಿದೆ. ಅವರಿಗೆ ಶುಭಾಶಯ ಕೋರುತ್ತೇನೆ. ನಾವು ಇನ್ನಷ್ಟೂ ಉತ್ತಮವಾಗಿ ಆಡುವ ಬಗ್ಗೆ ಚಿಂತಿಸುತ್ತೇವೆ" ಎಂದರು.
ರೋಹಿತ್ ಶರ್ಮಾ ಮಾತನಾಡಿ, "ಸ್ಟೀವ್ ಸ್ಮಿತ್ ಮತ್ತು ಟ್ರಾವೆಸ್ ಹೆಡ್ 280 ರನ್ ಜೊತೆಯಾಟ ತಂಡಕ್ಕೆ ಹಾನಿಮಾಡಿತು. ನಾವು ಮೊದಲ ಇನ್ನಿಂಗ್ಸ್ನಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟೆವು. ಅಲ್ಲಿ 100 ರಿಂದ 120 ರನ್ ಕಡಿಮೆ ಕೊಟ್ಟಿದ್ದರೆ ಭಾರತಕ್ಕೆ ಸಹಕಾರಿಯಾಗುತ್ತಿತ್ತು. ಆದರೆ ಹೆಡ್ ಮತ್ತು ಸ್ಮಿತ್ ಬೆಸ್ಟ್ ಇನ್ನಿಂಗ್ಸ್ ಕಟ್ಟಿದರು. ಅಲ್ಲದೇ ಕೊನೆಯ ದಿನ ಇಂದು ನಾವು ಒಳ್ಳೆಯ ಶಾಟ್ಗಳನ್ನು ಆಡುವಲ್ಲಿ ಸೋತೆವು. ನಮ್ಮ ಬ್ಯಾಟರ್ಗಳಿಂದ ದೊಡ್ಡ ಜೊತೆಯಾಟ ಬರದಿರುವುದು ಸಹ ಬೃಹತ್ ಭೇದಿಸುವಲ್ಲಿ ವಿಫಲವಾದೆವು. ಅಲ್ಲದೇ ಟಿ 20 ಮಾದರಿಯಿಂದ ಒಮ್ಮೆಗೆ ಟೆಸ್ಟ್ಗೆ ಸಿದ್ಧತೆ ನಡೆಸಿಕೊಳ್ಳಲು ಕಷ್ಟವಿದೆ. ಈ ನಡುವೆಯೂ ನಮ್ಮ ಬೌಲರ್ಗಳು ಉತ್ತಮವಾಗಿ ತಮ್ಮ ಪ್ರಯತ್ನವನ್ನು ಮಾಡಿದ್ದಾರೆ" ಎಂದರು.
"ಸುಮಾರು 25 ದಿನಗಳ ಅಭ್ಯಾಸಕ್ಕೆ ಅವಕಾಶ ಸಿಗಬೇಕು. ಟಿ20 ಲೆಂತ್ ಮತ್ತು ಲೈನ್ ಬೇರೆಯೇ ಇರುತ್ತದೆ, ಟೆಸ್ಟ್ ಎಂದು ಬಂದಾಗ ಬೇರೆಯೇ ಇರುತ್ತದೆ. ಬ್ಯಾಟಿಂಗ್ ಅಭ್ಯಾಸಕ್ಕೂ ಹೆಚ್ಚಿನ ಸಮಯ ಬೇಕಿತ್ತು. ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ್ನು ಒಂದು ಪಂದ್ಯದಲ್ಲಿ ನಿರ್ಧಾರ ಮಾಡುವುದಕ್ಕಿಂತ ಮೂರು ಪಂದ್ಯಗಳ ಸರಣಿ ಮಾಡಿದಲ್ಲಿ ಉತ್ತಮವಾಗಿರುತ್ತದೆ. ಎರಡು ವರ್ಷದಿಂದ ನಾವು ಉತ್ತಮ ಪ್ರದರ್ಶನ ನೀಡಿ ಫೈನಲ್ಸ್ ಪ್ರವೇಶಿಸಿದ್ದೇವೆ. ಹೀಗಾಗಿ ತಲೆ ತಗ್ಗಿಸುವ ಅಗತ್ಯವಿಲ್ಲ. ಮುಂದಿನ ಪಂದ್ಯಗಳಿಗೆ ಸಿದ್ಧತೆ ನಡೆಸಿಕೊಳ್ಳುತ್ತೇವೆ" ಎಂದಿದ್ದಾರೆ.
ಇದನ್ನೂ ಓದಿ:WTC Final: ಕಾಂಗರೂ ಪಡೆಗೆ ಒಲಿದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್.. ಎರಡನೇ ಫೈನಲ್ನಲ್ಲೂ ಮುಗ್ಗರಿಸಿದ ಭಾರತ