ಅಹಮದಾಬಾದ್, ಗುಜರಾತ್: ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಏಕದಿನ ವಿಶ್ವಕಪ್ 2023 ರ ಬಹು ನಿರೀಕ್ಷಿತ ಪಂದ್ಯಕ್ಕೆ ಮುನ್ನ, ಮೆನ್ ಇನ್ ಬ್ಲೂ ವೈಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಪಾಕ್ ಜೊತೆ ಆಡುವುದೇ ವಿಶೇಷ: ಐಸಿಸಿ ವಿಡಿಯೋವೊಂದರಲ್ಲಿ ಮಾತನಾಡುತ್ತಿದ್ದ ವಿರಾಟ್ ಕೊಹ್ಲಿ, ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದ ಬಗ್ಗೆ ಮಾತನಾಡಿದರು. ಇಂತಹ ಪಂದ್ಯಗಳು ಯಾವತ್ತೂ ವಿಶೇಷ ಅನಿಸುತ್ತದೆ. ಮೆಲ್ಬರ್ನ್‌ನ ಹೋಟೆಲ್, ಸ್ಟೇಡಿಯಂ ಹೊರಗಡೆ ಅಭಿಮಾನಿಗಳ ಸದ್ದು ನಿಜಕ್ಕೂ ಅದ್ಭುತವಾಗಿತ್ತು. ಮೈದಾನಕ್ಕೆ ಕಾಲಿಟ್ಟ ಕ್ಷಣದಲ್ಲೂ ಕ್ರೀಡಾಂಗಣದಲ್ಲೂ ಒಂದು ರೀತಿಯ ಶಕ್ತಿಯ ಭಾಸವಾಯಿತು ಎಂದು ಕೊಹ್ಲಿ ಐಸಿಸಿ ಹಂಚಿಕೊಂಡಿರುವ ವಿಡಿಯೋದಲ್ಲಿ ವಿವರಿಸಿದ್ದಾರೆ.
ನನಗೆ ಕಾಯಲು ಸಾಧ್ಯವಾಗುತ್ತಿಲ್ಲ:ಇಂದು ಅತ್ಯಂತ ರೋಚಕ ಸಮಯವಾಗಲಿದೆ. 110,000ಕ್ಕೂ ಅಧಿಕ ಅಭಿಮಾನಿಗಳ ಮುಂದೆ ಆಡುವುದನ್ನು ಎದುರು ನೋಡುತ್ತಿದ್ದೇನೆ. ಖಂಡಿತವಾಗಿಯೂ ತುಂಬಾ ಉತ್ಸುಕನಾಗಿದ್ದೇನೆ. ಈ ಪಂದ್ಯಕ್ಕಾಗಿ ಕಾಯಲು ನನಗೆ ಸಾಧ್ಯವಾಗುತ್ತಿಲ್ಲ. ಇದು ತುಂಬಾ ರೋಮಾಂಚನಕಾರಿ ಸಮಯವಾಗಲಿದೆ ಎಂದು ಮೆನ್ ಇನ್ ಬ್ಲೂ ವೈಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.