ದುಬೈ(ಯುಎಇ): ಐಸಿಸಿ U19 ಮಹಿಳೆಯರ T20 ವಿಶ್ವಕಪ್‌ಗೆ ಮುಂಚಿತವಾಗಿ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗಿದೆ. ಈ ಪಂದ್ಯಗಳು ನಡೆಯುವ ಸ್ಥಳಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪ್ರಕಟಿಸಿದೆ. ಈ ಐತಿಹಾಸಿಕ ಪಂದ್ಯಾವಳಿಯು ಜನವರಿ 14 ರಿಂದ 29ರವರೆಗೆ ನಡೆಯಲಿದ್ದು, ಟೂರ್ನಮೆಂಟ್ನಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದ್ದು, 41 ಪಂದ್ಯಗಳು ನಡೆಯಲಿವೆ. ಬೆನೋನಿ ಮತ್ತು ಪೊಟ್ಚೆಫ್‌ಸ್ಟ್ರೂಮ್‌ನ ನಾಲ್ಕು ಸ್ಥಳಗಳಲ್ಲಿ ಈ ಎಲ್ಲ ಪಂದ್ಯಗಳು ನಡೆಯಲಿವೆ ಎಂದು ಐಸಿಸಿ ತಿಳಿಸಿದೆ.
ಅಭ್ಯಾಸ ಪಂದ್ಯಗಳು ಜನವರಿ 9 ಮತ್ತು 11ರಂದು ಒಟ್ಟು ನಾಲ್ಕು ಸ್ಥಳಗಳಲ್ಲಿ ನಡೆಯಲಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿ ತಂಡವು ಎರಡು ಅನಧಿಕೃತ ಆಭ್ಯಾಸ ಪಂದ್ಯಗಳನ್ನು ಆಡಲಿವೆ. ಟೂರ್ನಮೆಂಟ್ನಲ್ಲಿ ಭಾಗವಹಿಸುವ ಪ್ರತಿ ತಂಡಗಳು ಜನವರಿ 9 ಮತ್ತು 11ರಂದು ಗೌಟೆಂಗ್ ಪ್ರಾಂತ್ಯದ ಸುತ್ತ ಇರುವ ಸೇಂಟ್ ಸ್ಟಿಥಿಯನ್ಸ್ ಕಾಲೇಜ್, ಸ್ಟೇನ್ ಸಿಟಿ ಸ್ಕೂಲ್, ಟಕ್ಸ್ ಓವಲ್ ಮತ್ತು ಹಮ್ಮನ್ಸ್ಕ್ರಾಲ್ ಓವಲ್‌ನಲ್ಲಿ ಸ್ಥಳಗಳಲ್ಲಿ ಎರಡು ಅನಧಿಕೃತ ಅಭ್ಯಾಸ ಪಂದ್ಯಗಳನ್ನು ಆಡಲಿವೆ. ಈ ಮೂಲಕ ಅವು ಎದುರಾಳಿಗಳನ್ನು ಕಟ್ಟಿ ಹಾಕಲು ಮತ್ತು ಕಪ್ ಗೆಲ್ಲಲು ರಣತಂತ್ರ ರೂಪಿಸಲಿವೆ.
ICC U19 ಮಹಿಳೆಯರ T20 ವಿಶ್ವಕಪ್ ವಾರ್ಮ್-ಅಪ್ ಪಂದ್ಯಗಳ ಪಟ್ಟಿ:ಜನವರಿ 9 ರಂದು ಸ್ಟೇನ್ ಸಿಟಿ ಸ್ಕೂಲ್‌ನಲ್ಲಿ ಭಾರತ ತಂಡವು ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಅದೇ ದಿನ ಸೇಂಟ್ ಸ್ಟಿಥಿಯನ್ಸ್ ಕಾಲೇಜಿನಲ್ಲಿ ಸ್ಕಾಟ್ಲೆಂಡ್ ತಂಡವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ವಿರುದ್ಧ ಪಂದ್ಯವನ್ನಾಡಲಿದೆ. ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವು ಐರ್ಲೆಂಡ್ ವಿರುದ್ದ ಟಕ್ಸ್ ಓವಲ್‌ನಲ್ಲಿ ಅಭ್ಯಾಸ ಪಂದ್ಯವನ್ನು ಆಡಲಿದೆ. ಇಂಡೋನೇಷ್ಯಾವು ಜಿಂಬಾಬ್ವೆಯನ್ನು ಹಮ್ಮನ್ಸ್‌ಕ್ರಾಲ್ ಓವಲ್‌ನಲ್ಲಿ ಎದುರಿಸಲಿದೆ.