ಕರ್ನಾಟಕ

karnataka

ETV Bharat / sports

ವಿಶ್ವಕಪ್​ ಕ್ರಿಕೆಟ್​​: ಬಾಬರ್, ಶಫೀಕ್ ಅರ್ಧಶತಕ: ಅಫ್ಘಾನಿಸ್ತಾನಕ್ಕೆ 283 ರನ್​ ಗುರಿ​ ನೀಡಿದ ಪಾಕಿಸ್ತಾನ - ETV Bharath Karnataka

ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ಇಂದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ವಿಶ್ವಕಪ್‌ ಕ್ರಿಕೆಟ್‌ ಪಂದ್ಯ ನಡೆಯುತ್ತಿದೆ.

ICC Cricket World Cup 2023
ICC Cricket World Cup 2023

By ETV Bharat Karnataka Team

Published : Oct 23, 2023, 5:58 PM IST

ಚೆನ್ನೈ (ತಮಿಳುನಾಡು): ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಬ್ಯಾಟಿಂಗ್​ ವೈಫಲ್ಯದಿಂದ ಸೋಲುಂಡ ಪಾಕಿಸ್ತಾನ ಇದೀಗ ಚೆನ್ನೈನ ಚೆಪಾಕ್​ ಮೈದಾನದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸುತ್ತಿದೆ. ಬಾಬರ್​ ಆಜಂ​ ಮತ್ತು ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್​ ಅವರ ಅರ್ಧಶತಕದ ಇನ್ನಿಂಗ್ಸ್​ ನೆರವಿನಿಂದ ನಿಗದಿತ 50 ಓವರ್‌ಗಳ​ ಅಂತ್ಯಕ್ಕೆ 7 ವಿಕೆಟ್​ ಕಳೆದುಕೊಂಡು ತಂಡ 282 ರನ್​ ಗಳಿಸಿತು.

ಟಾಸ್​ ಗೆದ್ದ ಪಾಕಿಸ್ತಾನದ ನಾಯಕ ಬಾಬರ್ ಆಜಂ​ ಮೊದಲು ಬ್ಯಾಟಿಂಗ್ ಮಾಡಲು ಮುಂದಾದರು. ಚೆನ್ನೈನ ಸ್ಪಿನ್​ ಪಿಚ್​ನಲ್ಲಿ ಶಾದಾಬ್ ಖಾನ್ ಅವರನ್ನು ನವಾಜ್​ ಬದಲಾಗಿ ಸೇರಿಸಿಕೊಂಡರು. ಅಬ್ದುಲ್ಲಾ ಶಫೀಕ್ ತಂಡಕ್ಕೆ ವೇಗದ ಆರಂಭ ನೀಡಿದರು. ಮೊದಲ ವಿಕೆಟ್​ಗೆ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್ 54 ರನ್​ಗಳ ಜತೆಯಾಟ ಮಾಡಿದರು. ಆದರೆ 17 ರನ್​ ಗಳಿಸಿದ್ದ ಇಮಾಮ್-ಉಲ್-ಹಕ್ ವಿಶ್ವಕಪ್​ನಲ್ಲಿ ಮತ್ತೆ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.

ಬಾಬರ್​ ಕಮ್​ಬ್ಯಾಕ್​: ಎರಡನೇ ವಿಕೆಟ್​ಗೆ ಅಬ್ದುಲ್ಲಾ ಶಫೀಕ್ ಜತೆಗೆ ನಾಯಕ ಬಾಬರ್ ಆಜಂ ಸೇರಿಕೊಂಡರು. ಈ ಜೋಡಿ ಎರಡನೇ ವಿಕೆಟ್​ಗೆ ಮತ್ತೊಂದು 54 ರನ್​ ಜತೆಯಾಟ ಮಾಡಿದರು. ಅರ್ಧಶತಕ ಗಳಿಸಿದ್ದ ಅಬ್ದುಲ್ಲಾ ಶಫೀಕ್ (58) ವಿಕೆಟ್​ ಕೊಟ್ಟರು. ವಿಶ್ವಕಪ್​ನಲ್ಲಿ ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ಸೋತಿದ್ದ ಬಾಬರ್​ ಇಂದು ಅಫ್ಘಾನ್​ ವಿರುದ್ಧ ಫಾರ್ಮ್​ಗೆ ಮರಳಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ರಿಜ್ವಾನ್ (8) ನಾಯಕನಿಗೆ ಆಸರೆಯಾಗಲಿಲ್ಲ. ಆದರೆ ಬಾಬರ್​ ಅಫ್ಘನ್​ ಸ್ಪಿನ್ನರ್​ಗಳನ್ನು ತಾಳ್ಮೆಯಿಂದ ಎದುರಿಸಿದರು. ​​

ಸೌದ್ ಶಕೀಲ್ ಬಾಬರ್ ಜತೆಗೆ 4ನೇ ವಿಕೆಟ್​ಗೆ ಜತೆಯಾಗಿ ಇನ್ನಿಂಗ್ಸ್​ ಕಟ್ಟಿದರು. ಈ ವೇಳೆ ಬಾಬರ್ ತಮ್ಮ ಅರ್ಧಶತಕ ಪೂರೈಸಿಕೊಂಡರು. ಇದು ಈ ವಿಶ್ವಕಪ್​ನಲ್ಲಿ ಬಾಬರ್​ ಆಜಂ​ ಬ್ಯಾಟ್​ನಿಂದ ಬಂದ ಎರಡನೇ ಅರ್ಧಶತಕವಾಗಿದೆ. ಸೌದ್ ಶಕೀಲ್ 25 ರನ್​ಗಳ ಚುಟುಕು ಇನ್ನಿಂಗ್ಸ್ ಮುಗಿಸಿದರು. ಬಾಬರ್​ ಆಜಂ​ 92 ಬಾಲ್​ ಆಡಿ 1 ಸಿಕ್ಸ್​ ಮತ್ತು 4 ಬೌಂಡರಿ ಸಹಾಯದಿಂದ 74 ರನ್​ಗಳಿಗೆ ವಿಕೆಟ್​ ಕೊಟ್ಟರು. ಈ ವಿಶ್ವಕಪ್​ನಲ್ಲಿ ಬಾಬರ್ ಗಳಿಸಿ ದೊಡ್ಡ ಮೊತ್ತ ಇದಾಗಿದೆ.

ಇಫ್ತಿಕರ್, ಶಾದಾಬ್ ಅಬ್ಬರ: ಈ ಇಬ್ಬರು ಬ್ಯಾಟರ್​ಗಳು ಕ್ರೀಸ್​ಗೆ ಬರುವಾಗ ಕೊನೆಯ 10 ಓವರ್​ ಬಾಕಿ ಇದ್ದ ಕಾರಣ ತಂಡದ ಮೊತ್ತ ಹೆಚ್ಚಿಸಲು ಬಿರುಸಿನ ಬ್ಯಾಟಿಂಗ್​ಗೆ ಮುಂದಾದರು. 27 ಬಾಲ್​ ಎದುರಿಸಿದ ಇಫ್ತಿಕರ್ ಅಹ್ಮದ್ 4 ಸಿಕ್ಸ್, 2 ಬೌಂಡರಿ ಸಹಾಯದಿಂದ 40 ರನ್​ ಗಳಿಸಿ ಕೊನೆಯ ಓವರ್‌ನಲ್ಲಿ ಔಟಾದರು. 40 ರನ್​ಗಳ ಇನ್ನಿಂಗ್ಸ್​ ಆಡಿದ ಶಾದಾಬ್ ಖಾನ್ ಸಹ ಪಂದ್ಯದ ಕೊನೆಯ ಬಾಲ್​ನಲ್ಲಿ ವಿಕೆಟ್​ ಕೊಟ್ಟರು. ಪಾಕಿಸ್ತಾನ 50 ಓವರ್​ಗೆ 7 ವಿಕೆಟ್​ ಕಳೆದುಕೊಂಡು 282 ರನ್​ ಕಲೆಹಾಕಿತು.

ಅಫ್ಘಾನಿಸ್ತಾನದ ಪರ ನೂರ್​ ಅಹಮ್ಮದ್​ 3, ನವೀನ್​ ಉಲ್​ ಹಕ್​ 2 ಮತ್ತು ಅಜ್ಮತುಲ್ಲಾ ಮಿರ್ಜಾ, ಮೊಹಮ್ಮದ್ ನಬಿ ತಲಾ ಒಂದೊಂದು ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್​​: ಗಾಯಗೊಂಡು ಇಂಗ್ಲೆಂಡ್​ ತಂಡದಿಂದ ಹೊರಬಿದ್ದ ಟೋಪ್ಲಿ, ಕಾರ್ಸೆಗೆ ಸ್ಥಾನ

ABOUT THE AUTHOR

...view details