ಧರ್ಮಶಾಲಾ, ಹಿಮಾಚಲ ಪ್ರದೇಶ: ಇಲ್ಲಿನ ಮೈದಾನದಲ್ಲಿ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದಿರುವ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಮಾಡಲು ಇಂಗ್ಲೆಂಡ್‌ಗೆ ಆಹ್ವಾನಿಸಿದೆ. ಈ ಮೈದಾನದಲ್ಲಿ ನಡೆದ ಕಳೆದ ಪಂದ್ಯದಲ್ಲೂ ಬಾಂಗ್ಲಾ ತಂಡ ಮೊದಲು ಬೌಲಿಂಗ್ ಮಾಡುವ ಮೂಲಕ ಗೆಲುವು ಸಾಧಿಸಿತ್ತು. ಇಲ್ಲಿ ಸ್ವಲ್ಪ ಚಳಿ ವಾತಾವರಣವಿದ್ದು, ವೇಗಿಗಳು ಇದರ ಸಹಾಯ ಪಡೆಯಬಹುದು ಎಂದು ಶಕೀಬ್ ಹೇಳಿದ್ದಾರೆ.
ಎರಡೂ ತಂಡಗಳಲ್ಲಿ ತಲಾ ಒಂದೊಂದು ಬದಲಾವಣೆ ಕಂಡುಬಂದಿದೆ. ಮೊಯಿನ್ ಅಲಿ ಬದಲಿಗೆ ಇಂಗ್ಲೆಂಡ್ ತಂಡ ರೀಸ್ ಟೋಪ್ಲೆ ಅವರನ್ನು ಆಯ್ಕೆ ಮಾಡಿದೆ. ಬಾಂಗ್ಲಾದೇಶವು ಮಹಮ್ಮದುಲ್ಲಾ ಅವರನ್ನು ಕೈಬಿಟ್ಟು ಮೆಹದಿ ಹಸನ್ ಅವರನ್ನ ತಂಡಕ್ಕೆ ತೆಗೆದುಕೊಂಡಿದೆ.
2023ರ ವಿಶ್ವಕಪ್‌ನ 7ನೇ ಪಂದ್ಯ ಇದಾಗಿದೆ. ಎಂಟನೇ ಪಂದ್ಯ ಇನ್ನೇನು ಆರಂಭಗೊಳ್ಳಲಿದೆ. ಈ ಪಂದ್ಯ ಇಂಗ್ಲೆಂಡ್‌ಗೆ ಮಹತ್ವದ್ದಾಗಿದೆ. ಏಕೆಂದರೆ ಈಗಾಗಲೇ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದ್ದು, ಜಯದ ಲಯ ಕಂಡುಕೊಳ್ಳಲು ಯತ್ನಿಸುತ್ತಿದೆ.
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ. ಆದರೆ, ಆರಂಭದಲ್ಲಿ ವೇಗದ ಬೌಲರ್‌ಗಳು ಪಿಚ್‌ನ ತೇವಾಂಶದ ಲಾಭವನ್ನು ಪಡೆಯಬಹುದಾಗಿದೆ. ಗುರಿ ಬೆನ್ನಟ್ಟಿದ ತಂಡ ಇಲ್ಲಿ ಹೆಚ್ಚು ಯಶಸ್ವಿಯಾಗಿರುವುದು ಗಮನಾರ್ಹ..