ಬೆಂಗಳೂರು :ಶಿವಮೊಗ್ಗ ಲಯನ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಹುಬ್ಬಳ್ಳಿ ಟೈಗರ್ಸ್ ತಂಡ ಮಹಾರಾಜ ಟ್ರೋಫಿಯಲ್ಲಿ ಸತತ ಐದನೇ ಗೆಲುವು ಸಾಧಿಸಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಲವನಿತ್ ಸಿಸೋಡಿಯಾ (69 ರನ್) ಮತ್ತು ಮನ್ವಂತ್ ಕುಮಾರ್ (3/23) ಭರ್ಜರಿ ಪ್ರದರ್ಶನದ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ 8 ವಿಕೆಟ್ ಗೆಲುವಿನ ನಗೆ ಬೀರಿತು.
ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ನಾಯಕ ಮನೀಶ್ ಪಾಂಡೆ ಶಿವಮೊಗ್ಗ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭಿಕರಾದ ನಿಹಾಲ್ ಉಳ್ಳಾಲ್ (3) ಮತ್ತು ರೋಹನ್ ಕದಂ (14) ಹಾಗೂ ರೋಹಿತ್ ಕೆ. (3) ಬಹುಬೇಗನೆ ಪೆವಿಲಿಯನ್ಗೆ ಮರಳಿದರು. ಹುಬ್ಬಳ್ಳಿ ಟೈಗರ್ಸ್ ಬೌಲರ್‌ಗಳ ಬಿಗುವಿನ ದಾಳಿಗೆ ಸಿಲುಕಿದ ಶಿವಮೊಗ್ಗ ಲಯನ್ಸ್ 10 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 49 ರನ್ ಗಳಿಸಿತ್ತು. ಬಳಿಕ ರೋಹನ್ ನವೀನ್ 18 ರನ್ ಗಳಿಸಿ ಔಟ್ ಆದರೆ, ಶ್ರೇಯಸ್ ಗೋಪಾಲ್ 10 ಮತ್ತು ಕ್ರಾಂತಿ ಕುಮಾರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕೆಳ ಕ್ರಮಾಂಕದಲ್ಲಿ ಪ್ರಣವ್ ಭಾಟಿಯಾ ಅಜೇಯ 46 ಮತ್ತು ಎಸ್.ಶಿವರಾಜ್ 21 ರನ್ ಗಳಿಸಿ ಶಿವಮೊಗ್ಗ ತಂಡ ಗೌರವಯುತ ಮೊತ್ತ ಕಲೆಹಾಕಲು ನೆರವಾದರು. ಅಂತಿಮವಾಗಿ ಶಿವಮೊಗ್ಗ ತಂಡ 8 ವಿಕೆಟ್ಗೆ 138 ರನ್ ಗಳಿಸಿತು. ಹುಬ್ಬಳ್ಳಿ ಪರ ಮನ್ವಂತ್ ಕುಮಾರ್ (3/23) ಹಾಗೂ ಪ್ರವೀಣ್ ದುಬೆ (2/15) ಬೌಲಿಂಗ್‌ನಲ್ಲಿ ಮಿಂಚಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಹುಬ್ಬಳ್ಳಿ ಟೈಗರ್ಸ್ ಉತ್ತಮ ಆರಂಭ ಪಡೆಯಿತು. ಲವನಿತ್ ಸಿಸೋಡಿಯಾ 69 ಮತ್ತು ಮೊಹಮ್ಮದ್ ತಾಹಾ 37 ರನ್ ಗಳಿಸಿ ಹುಬ್ಬಳ್ಳಿಗೆ ಸ್ಫೋಟಕ ಆರಂಭ ನೀಡಿದರು. ಈ ಹಂತದಲ್ಲಿ ಮೊಹಮ್ಮದ್ ತಾಹ ಅವರನ್ನು ಶ್ರೇಯಸ್ ಗೋಪಾಲ್ ಔಟ್ ಮಾಡಿದರು. 46 ಎಸೆತಗಳಲ್ಲಿ 10 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ನೆರವಿನಿಂದ 69 ರನ್ ಗಳಿಸಿದ್ದ ಲವನಿತ್ ಸಿಸೋಡಿಯಾ ಅವರು ಪ್ರಣವ್ ಭಾಟಿಯಾಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಗಾ ಭರತ್ (23*) ಮತ್ತು ಕೆ.ಎಲ್.ಶ್ರೀಜಿತ್ (6*) ಸುಲಭವಾಗಿ 20 ಎಸೆತಗಳು ಬಾಕಿ ಇರುವಂತೆಯೇ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಗೆಲುವಿನ ದಡ ತಲುಪಿಸಿದರು.