ನವದೆಹಲಿ:ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 2 ಟೆಸ್ಟ್ ಪಂದ್ಯಗಳನ್ನು ಹೀನಾಯವಾಗಿ ಸೋತಿರುವ ಆಸ್ಟ್ರೇಲಿಯಾ ತೀವ್ರ ಟೀಕೆಗೆ ಗುರಿಯಾಗಿದೆ. ತಂಡದ ಬ್ಯಾಟಿಂಗ್ ಸಂಪೂರ್ಣವಾಗಿ ವಿಫಲವಾಗಿದ್ದು, ಎರಡೂ ಪಂದ್ಯಗಳು ಮೂರೇ ದಿನದಲ್ಲಿ ಮುಕ್ತಾಯಗೊಂಡಿವೆ. ಅದರಲ್ಲೂ ಸ್ಪಿನ್ದ್ವಯರಾದ ಅಶ್ವಿನ್ ಮತ್ತು ಜಡೇಜಾ ಸ್ಪಿನ್ ಮಾರಕಾಸ್ತ್ರಕ್ಕೆ ಸಿಲುಕಿ ತಂಡ ನಲುಗಿದೆ. ಸರಣಿ ಸೋಲಿನ ಭೀತಿಯಲ್ಲಿರುವ ಆಸ್ಟ್ರೇಲಿಯಾ ಉಳಿದೆರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಈ ಮಧ್ಯೆ ತಂಡದ ದಯನೀಯ ಪ್ರದರ್ಶನವನ್ನು ಹಿರಿಯ ಮಾಜಿ ಆಟಗಾರರು ಟೀಕಿಸಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ವೈಫಲ್ಯ ಅನುಭವಿಸುತ್ತಿರುವ ತಂಡಕ್ಕೆ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ನೆರವಾಗಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ತಂಡಕ್ಕೆ ಯಾವುದೇ ರೀತಿಯಲ್ಲೂ ಸಹಾಯ ಮಾಡುವೆ. ಪ್ರದರ್ಶನ ಉತ್ತಮಪಡಿಸಿಕೊಂಡು ಸರಣಿ ಸಮಬಲ ಸಾಧಿಸಬೇಕು ಎಂದು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ, ಭಾರತದ ಸ್ಪಿನ್ನರ್‌ಗಳನ್ನು ಎದುರಿಸಲು ತಂಡ ತಿಣುಕಾಡುತ್ತಿದೆ. ಸೋಲಿನಿಂದ ಹೊರಬರಲು ತಾವು ಸಹಾಯ ಮಾಡಲು ಸಿದ್ಧರಿದ್ದೇವೆ. ತಂಡಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ. ಪ್ರತಿಶತ 100 ರಷ್ಟು ಪ್ರಯತ್ನ ಹಾಕುವೆ. ಭಾರತದ ಎದುರಿನ ಈಗಿನ ತಂಡದ ಪ್ರದರ್ಶನ ತೀರಾ ಕಳಪೆಯಾಗಿದೆ ಎಂದು ಅವರು ಹೇಳಿದ್ದಾರೆ.
ಫ್ರೀಯಾಗಿ ಕೆಲಸ ಮಾಡುವೆ:ತಂಡಕ್ಕೆ ನೆರವು ನೀಡುವ ಸಲುವಾಗಿ ನಾನು ಯಾವುದೇ ಹಣವನ್ನು ಪಡೆಯುವುದಿಲ್ಲ. ಆಟಗಾರರ ಪ್ರದರ್ಶನ ಉತ್ತಮಪಡಿಸಬೇಕಿದೆ. ತಂಡದಿಂದ ಹಿರಿಯ ಆಟಗಾರರನ್ನು ದೂರವಿಡಲು ಸಾಧ್ಯವಿಲ್ಲ. ನೆರವು ಬೇಕಾದಲ್ಲಿ ಪಡೆಯಬೇಕು ಎಂದು ಕ್ರಿಕೆಟ್ ಆಸ್ಟ್ರೇಲಿಯಾಗೆ ಸಲಹೆ ನೀಡಿದರು.