ನವದೆಹಲಿ: ಕೆರಿಬಿಯನ್ ನಾಡಿನಲ್ಲಿ ಅಂಡರ್ 19 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿ ದೇಶಕ್ಕೆ ದಾಖಲೆಯ 5 ಟ್ರೋಫಿಯನ್ನು ತಂದುಕೊಟ್ಟಿರುವ ನಾಯಕ ಯಶ್ ಧುಲ್ ಮುಂದಿನ 18 ತಿಂಗಳಲ್ಲಿ ಸೀನಿಯರ್ ತಂಡದಲ್ಲಿ ಆಡುವುದಕ್ಕೆ ಟಾರ್ಗೆಟ್ ನಿಗದಿಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ.
ಕಳೆದ 48 ಗಂಟೆಗಳಲ್ಲಿ ಕೆರಿಬಿಯನ್ನಿಂದ ಅಹ್ಮದಾಬಾದ್ವರೆಗೆ ಬಹುತೇಕ ಸಮಯವನ್ನು ವಿಮಾನದಲ್ಲೇ ಕಳೆದಿರುವ ಯಶ್ ಧುಲ್ ದೆಹಲಿ ರಣಜಿ ತಂಡದಲ್ಲಿ ಅವಕಾಶ ಪಡೆದಿದ್ದ, ಶೀಘ್ರದಲ್ಲೇ ಮತ್ತೊಂದು ಪಯಣಕ್ಕೆ ಸಿದ್ಧರಾಗಿದ್ದಾರೆ.
ಆಂಟಿಗುವಾದಲ್ಲಿ ವಿಶ್ವಕಪ್ ಎತ್ತಿ ಹಿಡಿದ ನಂತರ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗಿಲ್ಲ, ಆದರೂ ಇದರ ಬಗ್ಗೆ ಧುಲ್ರಲ್ಲಿ ಯಾವುದೇ ದೂರಿಲ್ಲ. ಏಕೆಂದರೆ ಇದು ವೃತ್ತಿಪರ ಕ್ರಿಕೆಟಿಗನಾಗಿ ಆರಂಭ ಎನ್ನುವುದನ್ನು ಅವರು ಚೆನ್ನಾಗಿ ಅರಿತುಕೊಂಡಿದ್ದಾರೆ.
ನಾನು ಕಳೆದ 5 ದಿನಗಳಲ್ಲಿ ಸರಿಯಾಗಿ ನಿದ್ರಿಸುತ್ತಿಲ್ಲ, ಆದರೆ ಇದು ನಾನು ದೂರು ನೀಡುವ ವಿಷಯವಲ್ಲ. ನಾನು ಇಲ್ಲಿಯವರೆಗೆ ಏನೂ ಮಾಡಿದ್ದೇನೆ ಮತ್ತು ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದರ ಬಗ್ಗೆ ನಾನು ಗಮನ ಹರಿಸಬೇಕಾಗಿದೆ ಎಂದು ತಮ್ಮ ರಣಜಿ ಟ್ರೋಫಿ ಕರೆಯನ್ನು ಉಲ್ಲೇಖಿಸಿ ಪಿಟಿಐಗೆ ತಿಳಿಸಿದ್ದಾರೆ.
ಕಿರಿಯರ ವಿಶ್ವಕಪ್ ಗೆದ್ದ ತಂಡದ ಬಹುಪಾಲು ಆಟಗಾರರು ರಾಷ್ಟ್ರೀಯ ತಂಡದಲ್ಲಿ ಆಡುವುದಕ್ಕೆ ಸಾಧ್ಯವಾಗಲ್ಲ. ಆದರೆ, ಧುಲ್ ದೊಡ್ಡ ಮಟ್ಟದಲ್ಲಿ ಆಡುವ ಸಾಮರ್ಥ್ಯವಿದೆ ಎಂಬುದನ್ನು ಕೆರಿಬಿಯನ್ ನಾಡಿನಲ್ಲಿ ತಮ್ಮ ಪ್ರದರ್ಶನದ ಮೂಲಕ ತೋರಿಸಿದ್ದಾರೆ. ಆತ ಮುಂದಿನ 18 ತಿಂಗಳಲ್ಲಿ ಭಾರತ ತಂಡದಲ್ಲಿ ಆಡುವುದಕ್ಕೆ ಗುರಿಯಿಟ್ಟುಕೊಂಡಿದ್ದಾರೆ.
"ಭಾರತ ತಂಡದಲ್ಲಿ ಆಡುವುದು ನನ್ನ ಗುರಿಯಾಗಿದೆ, ಅದಕ್ಕಾಗಿ 18 ತಿಂಗಳ ಕಾಲಮಿತಿ ಸೆಟ್ ಮಾಡಿಕೊಂಡಿದ್ದೇನೆ, ಒಂದು ವೇಳೆ, ಅಷ್ಟರಲ್ಲಿ ಅದನ್ನು ಮಾಡಲು ನನಗೆ ಸಾಧ್ಯವಾಗದಿದ್ದರೆ, ನನ್ನ ಗುರಿಯನ್ನು ಸಾಧಿಸುವವರೆಗೆ ನಾನು ಶ್ರಮಿಸುತ್ತೇನೆ" ಎಂದು ಯುವ ಕ್ರಿಕೆಟಿಗ ಹೇಳಿದ್ದಾರೆ.
ಯಶ್ ಧುಲ್ ಅಂಡರ್ 19 ವಿಶ್ವಕಪ್ನಲ್ಲಿ 4ಪಂದ್ಯಗಳಿಂದ 229 ರನ್ಗಳಿಸಿದ್ದರು. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 82 ರನ್ಗಳಿಸಿ ಗೆಲುವಿನಲ್ಲಿ ಪ್ರಮಖ ಪಾತ್ರವಹಿಸಿದ್ದರು. ಆದರೆ, 2ನೇ ಪಂದ್ಯದ ವೇಳೆ ಕೋವಿಡ್ 19 ಪಾಸಿಟಿವ್ಗೆ ತುತ್ತಾಗಿದ್ದರಿಂದ ಲೀಗ್ನ 2 ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದರು. ಕೋವಿಡ್ನಿಂದ ಚೇತರಿಸಿಕೊಂಡು ಬಾಂಗ್ಲಾದೇಶದ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಜೇಯ 20, ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ನಲ್ಲಿ 110ರನ್ಗಳಿಸಿದ್ದರು.
ಇದನ್ನೂ ಓದಿ:ಟಿ-20 ವಿಶ್ವಕಪ್ಗಾಗಿ ಬೆಳೆಸಬೇಕಾದ ಏಕೈಕ ಆಟಗಾರ ಇಶಾನ್ ಕಿಶನ್ ಮಾತ್ರ: ಪ್ರಗ್ಯಾನ್ ಓಝಾ