ಬರ್ಮಿಂಗ್ಹ್ಯಾಮ್: ಕಳೆದ ಎರಡೂವರೆ ವರ್ಷಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಬರೋಬ್ಬರಿ 5 ತಿಂಗಳ ಬಳಿಕ ಟಿ-20 ಕ್ರಿಕೆಟ್ ತಂಡಕ್ಕೆ ಮರಳಿದ್ದು, ಅವರ ಬ್ಯಾಟಿಂಗ್ ಪ್ರದರ್ಶನದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ. ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಕೇವಲ 1ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದ್ದಾರೆ. ನಾಯಕ ರೋಹಿತ್ ಶರ್ಮಾ 31 ರನ್ಗಳಿಕೆ ಮಾಡಿ ಔಟಾಗುತ್ತಿದ್ದಂತೆ ಮೈದಾನಕ್ಕೆ ಬಂದ ವಿರಾಟ್ ಕೊಹ್ಲಿ ತಾವು ಎದುರಿಸಿದ 3ನೇ ಎಸೆತದಲ್ಲಿ 34 ವರ್ಷದ ರಿಚರ್ಡ್ಗೆ ವಿಕೆಟ್ ಒಪ್ಪಿಸಿದ್ದಾರೆ.
ಮೊದಲ ಟಿ-20 ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ, ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಮೊದಲ ಪಂದ್ಯದಲ್ಲಿ ಮಿಂಚಿದ್ದ ದೀಪಕ್ ಹೂಡಾ ಅವರನ್ನ ಹೊರಗಿಟ್ಟು ಅನುಭವಿ ವಿರಾಟ್ಗೆ ಕಣಕ್ಕಿಳಿಸಲಾಗಿತ್ತು. ಈ ಪಂದ್ಯದಲ್ಲಿ ಅವರ ಬ್ಯಾಟ್ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಏನು ಮೂಡಿ ಬಂದಿಲ್ಲ. ಹೀಗಾಗಿ, ಮತ್ತೊಮ್ಮೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಮುಂಬರುವ ಟಿ-20 ವಿಶ್ವಕಪ್ಗೆ ಬಲಿಷ್ಠ ಪ್ಲೇಯಿಂಗ್ XI ತಂಡ ಕಟ್ಟುವ ಇರಾದೆ ಹೊಂದಿರುವ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ಫಾರ್ಮ್ ಹೆಚ್ಚಿನ ತಲೆನೋವಾಗಿದೆ. ಇವರನ್ನ ತಂಡದಿಂದ ಹೊರಗಿಟ್ಟು, ಯುವ ಪ್ಲೇಯರ್ಸ್ಗೆ ಚಾನ್ಸ್ ನೀಡಬೇಕಾ ಅಥವಾ ಇವರನ್ನೇ ತಂಡದಲ್ಲಿ ಮುಂದುವರೆಸಬೇಕಾ ಎಂಬ ಗೊಂದಲದಲ್ಲಿ ಆಯ್ಕೆ ಸಮಿತಿ ಇದೆ.