ಕರ್ನಾಟಕ

karnataka

ETV Bharat / sports

ಯಾರಿಗೆ ಡಬ್ಲ್ಯೂಟಿಸಿ ಫೈನಲ್​​​ ಟಿಕೆಟ್​? ತವರಿನಲ್ಲಿ ಸೋಲಿಲ್ಲದ ಸರದಾರನಿಗೆ ಆಂಗ್ಲರು ಹಾಕ್ತಾರಾ ಬ್ರೇಕ್​​?

ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ​ ಮತ್ತು ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್ ನೇತೃತ್ವದ ತಂಡಗಳ ನಡುವೆ ರೋಚಕತೆ ಸೃಷ್ಟಿಯಾಗಿದ್ದು, ಎಲ್ಲರ ಕಣ್ಣು ಇಂಡೋ-ಆಂಗ್ಲರ ನಡುವಿನ ಟೆಸ್ಟ್​ ಸರಣಿಯ ಮೇಲೆ ಬಿದ್ದಿದೆ.

ndia Vs England test series
ಭಾರತ vs ಇಂಗ್ಲೆಂಡ್​ ಟೆಸ್ಟ್​ ಸರಣಿ

By

Published : Feb 4, 2021, 4:30 PM IST

Updated : Feb 5, 2021, 5:15 AM IST

ಚೆನ್ನೈ:ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ (ಡಬ್ಲ್ಯೂಟಿಸಿ) ಫೈನಲ್​​ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಭಾರತ ಮತ್ತು ಇಂಗ್ಲೆಂಡ್​ ನಡುವೆ ಸಮರ ಏರ್ಪಟ್ಟಿದೆ. ಇಂದಿನಿಂದ 4 ಪಂದ್ಯಗಳ ಟೆಸ್ಟ್​ ಸರಣಿ ಆರಂಭವಾಗಲಿದೆ.

ದಕ್ಷಿಣ ಆಫ್ರಿಕಾಕ್ಕೆ ಆಸ್ಟ್ರೇಲಿಯಾ ಪ್ರವಾಸ ಮುಂದೂಡಿದ ಕಾರಣ ನ್ಯೂಜಿಲೆಂಡ್​ ಫೈನಲ್ ತಲುಪಿದ ಮೊದಲ ತಂಡವಾಗಿದ್ದು, ಕಿವೀಸ್​ ಜೊತೆ ಕಾದಾಡಲು ಈ ಎರಡು ತಂಡಗಳ ಅಂತಿಮ ಹೋರಾಟ ಇಂದಿನಿಂದ ಶುರುವಾಗಲಿದೆ. ಇತ್ತ ಫೈನಲ್​ ಕನಸಿನಲ್ಲಿರುವ ಮತ್ತೊಂದು ತಂಡ ಆಸ್ಟ್ರೇಲಿಯಾ ಕೂಡ ಇಂಡೋ-ಆಂಗ್ಲರ ಸರಣಿಯ ಮೇಲೆಯೇ ಚಿತ್ತ ಹರಿಸಿದೆ.

ಕೋವಿಡ್​-19ನಿಂದಾಗಿ ಒಂದು ವರ್ಷ ಸುದೀರ್ಘ ವಿರಾಮದ ನಂತರ ಭಾರತದಲ್ಲಿ ಆಡುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್​ನ ಮೊದಲ ಸರಣಿ ಇದಾಗಿದ್ದು, ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಈ ಸರಣಿ ಎಲ್ಲಾ ಸರಣಿಗಿಂತಲೂ ದೊಡ್ಡದಾಗಿರಲಿದೆ ಎಂಬ ಮಾತು ಕ್ರಿಕೆಟ್​ ತಜ್ಞರು ಮತ್ತು ಮಾಜಿ ಕ್ರಿಕೆಟಿಗರ ಬಾಯಲ್ಲಿ ಹೊರಳುತ್ತಿವೆ. ಹೀಗಾಗಿ, ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ​ ಮತ್ತು ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್ ನೇತೃತ್ವದ ತಂಡಗಳ ನಡುವೆ ರೋಚಕತೆ ಸೃಷ್ಟಿಯಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಗೆಲುವಿನ ನಂತರ ಮತ್ತೊಂದು ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ, ಈಚೆಗೆಷ್ಟೆ ಶ್ರೀಲಂಕಾದ ಎದುರು ಅದ್ಭುತ ಪ್ರದರ್ಶನ ತೋರಿ 2-0 ಸರಣಿ ವಶಪಡಿಸಿಕೊಂಡ ಇಂಗ್ಲೆಂಡ್​ ವಿರುದ್ಧ ಶುಕ್ರವಾರ ಬೆಳಗ್ಗೆ 9:30ಕ್ಕೆ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ತಮ್ಮ ಹೋರಾಟ ಆರಂಭಿಸಲಿದೆ. ಇತ್ತ ನಾಯಕ ಜೋ ರೂಟ್​​ಗೆ 100ನೇ ಪಂದ್ಯ ಇದಾಗಿದೆ. ಮತ್ತೊಂದು ವಿಶೇಷ ಎಂದರೆ ರೂಟ್​ ಟೆಸ್ಟ್​ಗೆ ಪದಾರ್ಪಣೆ ಮಾಡಿದ್ದು ಕೂಡ ಭಾರತದ ಎದುರೇ. ಈಗ ನೂರನೇ ಪಂದ್ಯವನ್ನೂ ಬ್ಲೂ ಜೆರ್ಸಿ ಎದುರೇ ಆಡುತ್ತಿದ್ದಾರೆ.

ಬಾರ್ಡರ್​-ಗವಾಸ್ಕರ್​ ಟ್ರೋಫಿಯ ಮೊದಲ ಪಂದ್ಯದ ನಂತರ ಪಿತೃತ್ವ ರಜೆಯ ಮೇಲೆ ಭಾರತಕ್ಕೆ ಮರಳಿದ ನಂತರ ತಂಡಕ್ಕೆ ವಾಪಾಸಾಗಿರುವ ವಿರಾಟ್​ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅಲ್ಲದೆ, ಆಸ್ಟ್ರೇಲಿಯಾ ಸರಣಿಯಲ್ಲಿ ಅನುಭವಿ ಆಟಗಾರರು ಗಾಯಾಳುಗಳಾಗಿ ಆ ಟೂರ್ನಿಯಿಂದ ಹೊರ ಬಿದ್ದಿದ್ದರು. ಯುವಕರು ತಂಡದಲ್ಲಿ ಮೇಲುಗೈ ಸಾಧಿಸಿ ಸರಣಿ ಗೆಲುವಿಗೆ ಪ್ರಮುಖ ಪಾತ್ರರಾದರಲ್ಲದೆ, ಇತಿಹಾಸ ಬರೆದರು. ಅನುಭವಿಗಳ ಕೊರತೆ, ನಿಂದನೆ ನಡುವೆಯೂ ಯುವಕರು ಮೆಟ್ಟಿ ನಿಂತದ್ದು ಮಾತ್ರ ಆಶ್ಚರ್ಯವೇ ಸರಿ. 2013ರಿಂದ ಈವರೆಗೂ ತವರಿನಲ್ಲಿ ಸತತ 12 ಸರಣಿ ಜಯಿಸಿರುವ ಭಾರತ, ಮತ್ತೊಂದು ಗೆಲುವಿನ ತವಕದಲ್ಲಿದೆ. 2016ರಲ್ಲೇ ಇಂಗ್ಲೆಂಡ್​ ಅನ್ನು 4-0 ಅಂತರದಲ್ಲಿ ಸೋಲಿಸಿತ್ತು.

ಇದನ್ನೂ ಓದಿ...ಆಸೀಸ್​​ನಲ್ಲಿ ಅಸಾಮಾನ್ಯ ಗೆಲುವು ಸಾಧಿಸಿದ ಭಾರತ : ಕೇನ್ ವಿಲಿಯಮ್ಸನ್​ ಶ್ಲಾಘನೆ

ಉತ್ತಮ ಆರಂಭದ ನಿರೀಕ್ಷೆಯಲ್ಲಿ ಭಾರತ: ಆಸೀಸ್​ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಶುಭ್ಮನ್​ ಗಿಲ್​, ಹಿಟ್​ಮ್ಯಾನ್ ರೋಹಿತ್​ ಶರ್ಮಾ ಜೊತೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಉತ್ತಮ ಆರಂಭ ಕಟ್ಟಿಕೊಡುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ, 3ನೇ ಸ್ಥಾನದಲ್ಲಿ ಚೇತೇಶ್ವರ ಪೂಜಾರ, ನಾಲ್ಕನೇ ಸ್ಥಾನದಲ್ಲಿ ನಾಯಕ ಕೊಹ್ಲಿ ಬ್ಯಾಟ್​ ಬೀಸಲಿದ್ದು ರನ್​ಗಳ ವಿಕೆಟ್ ಕಾಪಾಡುವ ಭರವಸೆ ಇದೆ. ಐತಿಹಾಸಿಕ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಅಜಿಂಕ್ಯ ರಹಾನೆ ಕೂಡ ಉತ್ತಮ ಫಾರ್ಮ್​ನಲ್ಲಿದ್ದಾರೆ. ಇದು ತಂಡದ ಬಲವನ್ನು ಹೆಚ್ಚಿಸಿದೆ. ಅಲ್ಲದೆ, ವೇಗಿಗಳಾದ ಇಶಾಂತ್​ ಶರ್ಮಾ, ಮೊಹಮ್ಮದ್​ ಶಮಿ, ಜಸ್​ಪ್ರಿತ್ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಬಂದಿದ್ದು ತಂಡಕ್ಕೆ ನೆರವಾಗಿದೆ.

ಇಶಾಂತ್​ ಶರ್ಮಾ ತನ್ನ ಕೊನೆಯ ಟೆಸ್ಟ್​ ಪಂದ್ಯದಲ್ಲಿ 5 ವಿಕೆಟ್​ಗಳ ಗೊಂಚಲು ಪಡೆದು ಗಾಯದಿಂದ ಸರಣಿಯಿಂದ ಹೊರಗುಳಿದಿದ್ದರು. ಅಲ್ಲದೆ, ಇಶಾಂತ್​ ಇನ್ನು ಮೂರು ಪಂದ್ಯವಾಡಿದರೆ 100 ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಗೆ ಸೇರುತ್ತಾರೆ. ಆದರೆ, ಈ ಮೂವರಲ್ಲಿ ಯಾರು ಕಣಕ್ಕಿಳಿಯುತ್ತಾರೋ ನೋಡಬೇಕಿದೆ. ಸ್ಪಿನ್​ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿದೆ. ಆರ್. ಅಶ್ವಿನ್, ಬ್ರಿಸ್ಬೇನ್‌ನಲ್ಲಿ ಉತ್ತಮ ಚೊಚ್ಚಲ ಪಂದ್ಯವಾಡಿದ ವಾಷಿಂಗ್ಟನ್ ಸುಂದರ್ ಅಥವಾ ಕುಲದೀಪ್ ಯಾದವ್, ಅಕ್ಷರ್​ ಪಟೇಲ್ ದಾಳಿ ನಡೆಸುವ ಸಾಧ್ಯತೆ ಇದೆ.

ಇಂಗ್ಲೆಂಡ್​ ತಂಡವನ್ನೂ ಕಡೆಗಣಿಸುವಂತಿಲ್ಲ:ಆಂಗ್ಲರ ತಂಡವನ್ನು ನಾವು ಕಡೆಗಣಿಸುವಂತಿಲ್ಲ. 600 ವಿಕೆಟ್​ ಕಬಳಿಸಿರುವ ಜೇಮ್ಸ್​ ಆ್ಯಂಡರ್​ಸನ್​ ಭಾರತಕ್ಕೆ ಪೆಟ್ಟು ಕೊಡಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಸ್ಟುವರ್ಟ್​ ಬ್ರಾಡ್​ ಕೂಡ ಭಾರತ ಆಟಗಾರರ ಮೇಲೆ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಬ್ಯಾಟಿಂಗ್​ ವಿಭಾಗದಲ್ಲಿ ಜೋ ರೂಟ್, ಬಟ್ಲರ್​ ಉತ್ತಮ ಲಯದಲ್ಲಿದ್ದಾರೆ. ಆಲ್​ರೌಂಡರ್ ಬೆನ್​ಸ್ಟೋಕ್ಸ್​ ಕೂಡ ಉತ್ತಮ ಪ್ರದರ್ಶನ ತೋರುವ ತವಕದಲ್ಲಿದ್ದಾರೆ. ಈ ಬ್ಯಾಟ್ಸ್​ಮನ್​ಗಳು ಐಪಿಎಲ್​ ಆಡಿರುವ ಕಾರಣ, ಪಿಚ್​ಗಳ ಕುರಿತು ಅರಿತವರಾಗಿದ್ದಾರೆ. ಇನ್ನು ಜೋಫ್ರಾ ಆರ್ಚರ್ ಕೂಡ ಯಾರ್ಕರ್​ ಮತ್ತು ಬೌನ್ಸರ್​ಗಳ ಮೂಲಕ ಬ್ಯಾಟ್​ಮನ್​ಗಳ ಜೊತೆಯಾಟಕ್ಕೆ ಬ್ರೇಕ್​ ಹಾಕುವ ಬಲ ಹೊಂದಿದ್ದಾರೆ.

ಲಯದಲ್ಲಿ ರೂಟ್​, ಕೊಹ್ಲಿ: 2012ರಲ್ಲಿ ನಡೆದ ಆಂಗ್ಲರ ವಿರುದ್ಧದ ಸರಣಿಯಲ್ಲಿ ವಿರಾಟ್​ ಕೊಹ್ಲಿ 5 ಪಂದ್ಯಗಳಲ್ಲಿ 655 ರನ್​ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅಂದು ರೂಟ್​ ಕೂಡ 491 ರನ್​ ಗಳಿಸುವ ಮೂಲಕ ಹೆಚ್ಚು ರನ್​ ಬಾರಿಸಿದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರು. ಅದೂ ಅಲ್ಲದೆ, ಮೊನ್ನೆಯಷ್ಟೆ ಶ್ರೀಲಂಕಾ ಸರಣಿಯಲ್ಲಿ ಬರೀ 2 ಪಂದ್ಯಗಳಿಂದ 426 ರನ್​ ಬಾರಿಸಿದ್ದರು. ಅದರಲ್ಲಿ ಒಂದು ಶತಕ ಮತ್ತು ಒಂದು ದ್ವಿಶತಕ ಸೇರಿದ್ದು, ಸರಾಸರಿ 100ಕ್ಕೂ ಅಧಿಕವಿದೆ.

  • ಪಂದ್ಯ ಆರಂಭ: ಬೆಳಿಗ್ಗೆ 9:30, ಸ್ಥಳ-ಎಂ.ಎ.ಚಿದಂಬರಂ ಸ್ಟೇಡಿಯಂ, ಚೆನ್ನೈ

ಸಂಭಾವ್ಯ ತಂಡಗಳು ಇಂತಿವೆ

ಭಾರತ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ರಿಷಬ್ ಪಂತ್ (ಕೀಪರ್​​), ರವಿಚಂದ್ರನ್ ಅಶ್ವಿನ್, ಜಸ್ಪ್ರಿತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್ ಪಟೇಲ್, ಹಾರ್ದಿಕ್ ಪಾಂಡ್ಯ, ಮಾಯಾಂಕ್ ಅಗರ್ವಾಲ್, ಕೆ.ಎಲ್. ರಾಹುಲ್, ವೃದ್ಧಿಮಾನ್ ಸಹಾ (ಕೀಪರ್​​), ಶಾರ್ದುಲ್ ಠಾಕೂರ್.

ಇಂಗ್ಲೆಂಡ್:ಜೋ ರೂಟ್ (ನಾಯಕ), ಡೊಮಿನಿಕ್ ಸಿಬ್ಲಿ, ರೋರಿ ಬರ್ನ್ಸ್, ಪೋಪ್, ಡಾನ್ ಲಾರೆನ್ಸ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ಕೀಪರ್​​), ಬೆನ್ ಫೋಕ್ಸ್ (ಕೀಪರ್​​), ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಜೇಮ್ಸ್ ಆ್ಯಂಡರ್​​ಸನ್, ಸ್ಟುವರ್ಟ್ ಬ್ರಾಡ್, ಡೊಮಿನಿಕ್ ಬೆಸ್, ಜ್ಯಾಕ್ ಲೀಚ್, ಆಲಿ ಸ್ಟೋನ್.

Last Updated : Feb 5, 2021, 5:15 AM IST

ABOUT THE AUTHOR

...view details