ಹಾಲೆಂಡ್: ಇಲ್ಲಿಯ ಆಮ್ಸ್ಸ್ಟ್ಲೀವ್ನಲ್ಲಿ ನಡೆದ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡ ವಿಶ್ವದಾಖಲೆ ಬರೆಯಿತು. ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು 498 ರನ್‌ಗಳನ್ನು ಸಿಡಿಸಿದ್ದು ಕ್ರಿಕೆಟ್ ಲೋಕದ ಹುಬ್ಬೇರಿಸಿದೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚಿನ ರನ್ ಗಳಿಸಿದ ತನ್ನದೇ ದಾಖಲೆಯನ್ನು ಆಂಗ್ಲರು ಮುರಿದರು.
ಏಕದಿನ ಕ್ರಿಕೆಟ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ವಿಶ್ವದಾಖಲೆ ಬರೆದ ಇಂಗ್ಲೆಂಡ್! - England world record
ಏಕದಿನ ಕ್ರಿಕೆಟ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಇಂಗ್ಲೆಂಡ್ ತಂಡವು ಬರೋಬ್ಬರಿ 498 ರನ್ ಗಳಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿತು.
ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಮೂವರು ಆಟಗಾರರು ಶತಕ ಬಾರಿಸಿದರೆ, ಲಿಯಾಮ್ ಲಿವಿಂಗ್ಸ್ಟೋನ್ ಸ್ಪೋಟಕ ಅರ್ಧ ಶತಕ ದಾಖಲಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ಕೇವಲ 70 ಎಸೆತಗಳಲ್ಲಿ 162 ರನ್ ಬಾರಿಸುವ ಮೂಲಕ ಐತಿಹಾಸಿಕ ಸಾಧನೆಯಲ್ಲಿ ಮಹತ್ವದ ಪಾತ್ರವಹಿಸಿದರು. ಫಿಲಿಪ್ ಸಾಲ್ಟ್ 122 ರನ್ ಕಲೆ ಹಾಕಿದರೆ, ಡೇವಿಡ್ ಮಲನ್ 125 ರನ್ ಗಳಿಸಿದರು.
ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿಶ್ವದಾಖಲೆ ಬರೆದಿದೆ. ಈ ಬೃಹತ್ ಸ್ಕೋರ್‌ನೊಂದಿಗೆ 2018 ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ (481-6)ದ ಏಕದಿನ ಪಂದ್ಯದ ದಾಖಲೆಯನ್ನು ಇಂಗ್ಲೆಂಡ್ ತಂಡ ತಾನೇ ಅಳಿಸಿ ಮುನ್ನುಗ್ಗಿದೆ. ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ರನ್‌ಗಳಿಸಿದ ತಂಡದ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿ ಇಂಗ್ಲೆಂಡ್ ತಂಡವೇ ಇದೆ.