ಸೆಂಚುರಿಯನ್ (ದಕ್ಷಿಣ ಆಫ್ರಿಕಾ):ದಕ್ಷಿಣ ಆಫ್ರಿಕಾ ತಂಡದನಾಯಕ ಟೆಂಬಾ ಬವುಮಾ ಅವರು ಗಾಯದಿಂದ ಚೇತರಿಕೊಳ್ಳದ ಹಿನ್ನೆಲೆಯಲ್ಲಿ ಭಾರತದ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದಿಂದ ಹೊರಬಿದ್ದಿದ್ದಾರೆ. ಬವುಮಾ ಅನುಪಸ್ಥಿತಿಯಲ್ಲಿ ಹಿರಿಯ ಆಟಗಾರ ಡೀನ್ ಎಲ್ಗರ್ಗೆ ಮುಂದಾಳತ್ವದಲ್ಲಿ ಹರಣಿಗಳು ಮುಂದಿನ ಟೆಸ್ಟ್ ಆಡಲಿದ್ದಾರೆ. ಅಪರೂಪವೆಂಬಂತೆ ಕ್ರಿಕೆಟ್ಗೆ ವಿದಾಯದ ಘೋಷಿಸುತ್ತಿರುವ ಪಂದ್ಯದಲ್ಲಿ ಎಲ್ಗರ್ಗೆ ಮರಳಿ ದೇಶದ ತಂಡದ ನಾಯಕತ್ವ ವಹಿಸುವ ಸುವರ್ಣಾವಕಾಶ ಒಲಿದಿದೆ.
ಸೆಂಚುರಿಯನ್ ಟೆಸ್ಟ್ ಪಂದ್ಯದ ಮೊದಲ ದಿನದಂದು ಫೀಲ್ಡಿಂಗ್ ಮಾಡುವಾಗ ನಾಯಕ ಬವುಮಾ ಗಾಯಗೊಂಡಿದ್ದರು. ಬಳಿಕ ಅವರು ಮೈದಾನಕ್ಕೆ ಮರಳಲಿಲ್ಲ. ಸ್ಕ್ಯಾನ್ ವರದಿ ಪ್ರಕಾರ ಮಂಡಿರಜ್ಜು ಗಾಯಕ್ಕೀಡಾಗಿರುವುದು ದೃಢಪಟ್ಟಿದೆ. ಇದರಿಂದ ಡೀನ್ ಎಲ್ಗರ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಅಂತಿಮ ಪಂದ್ಯದಲ್ಲಿ ತಂಡದ ಮುಂದಾಳತ್ವ ವಹಿಸಲಿದ್ದಾರೆ. ಈ ಟೆಸ್ಟ್ ಸರಣಿಗೆ ಮುನ್ನವೇ ಎಲ್ಗರ್ ನಿವೃತ್ತಿ ಹೊಂದುವ ಬಗ್ಗೆ ಪ್ರಕಟಿಸಿದ್ದರು.
ಮೊದಲ ಟೆಸ್ಟ್‌ನಲ್ಲೂ ಕೂಡ ಬವುಮಾ ಗಾಯಗೊಂಡು ಹೊರನಡೆದ ಬಳಿಕ ತಂಡವನ್ನು ಎಲ್ಗರ್ ಮುನ್ನಡೆಸಿದ್ದರು. ಅಲ್ಲದೆ, ಅದ್ಭುತ ಶತಕ ದಾಖಲಿಸಿ ಸೆಂಚುರಿಯನ್‌ನಲ್ಲಿ ಇನ್ನಿಂಗ್ಸ್ ಹಾಗೂ 32 ರನ್‌ಗಳ ವಿಜಯ ಸಾಧಿಸಿದ್ದಾರೆ. ಹೊಸ ವರ್ಷದ ಜನವರಿ 3 ರಿಂದ ಕೇಪ್‌ಟೌನ್‌ನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್‌ಗೆ ಬವುಮಾ ಬದಲಿಗೆ ಜುಬೇರ್ ಹಮ್ಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.