ಮುಂಬೈ:ಭಾರತದ ಪ್ರತಿಭಾನ್ವಿತ ಕ್ರಿಕೆಟಿಗರು, ಭವಿಷ್ಯದ ನಾಯಕರೆಂದೇ ಗುರುತಿಸಿಕೊಂಡಿರುವ ಕೆ.ಎಲ್.ರಾಹುಲ್ ಮತ್ತು ರಿಷಭ್ ಪಂತ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗುರುವಾರದ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ರಾಹುಲ್ ಮತ್ತು ಪಂತ್ ಇಬ್ಬರು ಮ್ಯಾಚ್ ವಿನ್ನರ್ಗಳೇ. ತಮ್ಮದೇ ಆದ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಈಗಾಗಲೇ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
ಭವಿಷ್ಯದ ನಾಯಕರ ಪಟ್ಟಿಯಲ್ಲಿರುವ ಈ ಇಬ್ಬರು ಕ್ರಿಕೆಟಿಗರಿಗೆ ಪ್ರತಿಷ್ಠಿತ ಟಿ20 ಲೀಗ್ನಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದೆ. ಹಾಗಾಗಿ, ತಮ್ಮ ನಿರ್ಧಾರ ತೆಗೆದುಕೊಳ್ಳುವುದು ಮತ್ತು ನಾಯಕತ್ವ ಕೌಶಲ್ಯಗಳನ್ನು ಪ್ರದರ್ಶಿಸಲು ಉಭಯತ್ರಯರಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ. 15ನೇ ಆವೃತ್ತಿಯಲ್ಲಿ ತಲಾ ಒಂದು ಜಯ ಮತ್ತು ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ಗೆ ಈ ಪಂದ್ಯದಲ್ಲಿ ವಾರ್ನರ್ ಮತ್ತು ಎನ್ರಿಚ್ ನಾರ್ಕಿಯಾ ಅವರ ಸೇರ್ಪಡೆ ಬಲ ತಂದರೆ, ಇತ್ತ ಬಲಿಷ್ಠ ಬ್ಯಾಟಿಂಗ್ ಬಲ ಹೊಂದಿರುವ ಲಖನೌ ತಂಡಕ್ಕೆ ಮಾರ್ಕಸ್ ಸ್ಟೋಯಿನಿಸ್ ತಂಡಕ್ಕೆ ಸೇರುವ ಮೂಲಕ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲಿದ್ದಾರೆ.
ಕಿವೀಸ್ ವಿಕೆಟ್ ಕೀಪರ್ ಟಿಮ್ ಸೀಫರ್ಟ್ ಅವರೂ ವಾರ್ನರ್ಗೂ, ರೋವ್ಮನ್ ಪೊವೆಲ್ ಅಥವಾ ಮುಸ್ತಫಿಜುರ್ ರೆಹಮಾನ್ ಇಬ್ಬರಲ್ಲಿ ಒಬ್ಬರು ನಾರ್ಕಿಯಾಗೆ ಅವಕಾಶ ಬಿಟ್ಟುಕೊಡಬೇಕಾಗುತ್ತದೆ. ರಿಟೈನ್ ಮಾಡಿಕೊಂಡಿರುವ ಆಲ್ರೌಂಡರ್ ಸ್ಟೋಯಿನಿಸ್ ಖಂಡಿತ ಆಡುವ 11ರ ಬಳಗದಲ್ಲಿರಬೇಕಾಗಿದೆ. ಹಾಗಾಗಿ ಅವರಿಗೆ ಕಳೆದ ಪಂದ್ಯದಲ್ಲಿ ಆಡಿದ್ದ ಆ್ಯಂಡ್ರೂ ಟೈ ಅಥವಾ ಎವಿನ್ ಲೂಯಿಸ್ ಹೊರಗುಳಿಯಬೇಕಾಗುತ್ತದೆ. ಸಿಎಸ್ಕೆ ವಿರುದ್ಧ ನಡೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಗೆಲುವಿನಲ್ಲಿ ಲೂಯಿಸ್ ಪ್ರಮುಖ ಪಾತ್ರವಹಿಸಿರುವುದರಿಂದ ಅವರನ್ನು ಕೈಬಿಡುವ ಸಾಧ್ಯತೆ ಕಡಿಮೆಯಿದೆ.
ಮನೀಶ್ ಪಾಂಡೆ ಕಳೆದ 3 ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಹಾಗಾಗಿ ಈ ಪಂದ್ಯದಲ್ಲಿ ಅವರಿಗೆ ಅಂತಿಮ ಅವಕಾಶ ನೀಡಬಹುದು. ಈಗಾಗಲೇ ಗಂಭೀರ್ ತಮ್ಮ ಆಟಗಾರರ ಮೇಲೆ ನಂಬಿಕೆಯಿದೆ ಎಂದು ತಿಳಿಸಿರುವುದರಿಂದ ಅವರಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ. ಆದರೆ ಲಖನೌ ತಂಡದಲ್ಲಿ ಹೋಲ್ಡರ್ಗೆ ಅವಕಾಶ ಸಿಗಬಹುದೇ ಎನ್ನುವುದು ಇನ್ನೂ ಖಚಿತವಾಗಿಲ್ಲ.