ಸಿಡ್ನಿ (ಆಸ್ಟ್ರೇಲಿಯಾ): 'ನಾನು ತಂಡಕ್ಕಾಗಿ ಪಿಟ್ ಅಲ್ಲ ಎಂದು ಆಯ್ಕೆಗಾರರಿಗೆ ಎನಿಸಿದರೆ ಕೈ ಬಿಡಲಿ. ಆದರೆ ತಂಡಕ್ಕಾಗಿ ರನ್ ಗಳಿಸುವ ದಾಹ ನನ್ನಲ್ಲಿ ಆರಿಲ್ಲ' ಎಂದು ಆಸಿಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ. ಈ ಮೂಲಕ ಆಯ್ಕೆಗಾರರು ತಂಡಕ್ಕೆ ಸೇರ್ಪಡೆ ಮಾಡದಿದ್ದರೆ ನಿವೃತ್ತಿಯ ಚಿಂತನೆ ಮಾಡಲಿದ್ದಾರೆ ಎಂಬ ಮುನ್ಸೂಚನೆಯನ್ನೂ ಇಟ್ಟಿದ್ದಾರೆ. ಆದರೆ ವೈಟ್ ಬಾಲ್ನಲ್ಲಿ ಇನ್ನಷ್ಟು ಆಡುವ ಹುಮ್ಮಸ್ಸನ್ನೂ ತೋರಿದ್ದಾರೆ.
ಗಾಯದ ಸಮಸ್ಯೆಯಿಂದ ಎರಡೇ ಟೆಸ್ಟ್ನ ಮೊದಲ ಇನ್ನಿಂಗ್ಸ್ ನಂತರ ತಂಡದಿಂದ ಹೊರಗುಳಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ದೆಹಲಿಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಸಿರಾಜ್ ಬೌಲಿಂಗ್ ವೇಳೆ ಬೌನ್ಸ್ ಬಾಲ್ ಮೊಣಕೈಗೆ ತಗುಲಿ ಗಾಯವಾಗಿತ್ತು. ಇದರಿಂದ ಚಿಕಿತ್ಸೆಯ ಸಲುವಾಗಿ ಸ್ವದೇಶಕ್ಕೆ ಮರಳಿದ್ದರು.
ಬ್ಯಾಟಿಂಗ್ನಲ್ಲಿ ಸತತ ವಿಫಲತೆ ಕಾಣುತ್ತಿರುವ ವಾರ್ನರ್ ಫಾರ್ಮ್ ಬಗ್ಗೆ ಇತ್ತೀಚೆಗೆ ಟೀಕೆಗಳು ಕೇಳಿ ಬರುತ್ತಿದೆ. ಇತ್ತೀಚೆಗೆ ವಾರ್ನರ್ ಆಟದ ಬಗ್ಗೆ ಆಸಿಸ್ ತಂಡದ ಇನ್ನೊಬ್ಬ ಆರಂಭಿಕ ಬ್ಯಾಟರ್ ಖವಾಜಾ ಕೇವಲ ಮೂರು ಇನ್ನಿಂಗ್ಸ್ನಿಂದ ಬ್ಯಾಟಿಂಗ್ ಅಳೆಯ ಬಾರದು ಎಂದು ವಾರ್ನರ್ ಪರ ಮಾತನಾಡಿದ್ದರು. ಹಿಂದಿನ ಮೂರು ವರ್ಷಗಳಲ್ಲಿ ಕೇವಲ ಒಂದು ಟೆಸ್ಟ್ ಶತಕವನ್ನು ಗಳಿಸಿದ್ದಾರೆ. 36 ವರ್ಷದ ವಾರ್ನರ್ ಈ ವರ್ಷದ ಆಶಸ್ ಪ್ರವಾಸದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಇಚ್ಚೆ ಹೊಂದಿದ್ದಾರೆ. ಆದರೆ, ಸತತ ವೈಫಲ್ಯ ಕಾಣುತ್ತಿರುವ ಬ್ಯಾಟರ್ ವಾರ್ನರ್ಗೆ ಆಯ್ಕೆಗಾರರು ಮಣೆ ಹಾಕುತ್ತಾರ ಎಂಬುದು ಪ್ರಶ್ನೆಯಾಗಿದೆ.
ಈ ಬಗ್ಗೆ ಮಾತನಾಡಿರುವ ವಾರ್ನರ್,'2024 ವರೆಗೆ ಬ್ಯಾಟ್ ಬೀಸುವ ಬಗ್ಗೆ ನಾನು ದೃಢವಾಗಿದ್ದೇನೆ. ಆದರೆ, ಆಯ್ಕೆಗಾರರು ನನ್ನನ್ನು ತಂಡಕ್ಕೆ ಸೇರಿಸುತ್ತಾರಾ ಎಂಬುದು ಗೊತ್ತಿಲ್ಲ. ಆದರೆ, ಚುಟುಕು ಮತ್ತು ಏಕದಿನ ತಂಡದಲ್ಲಿ ಅವಕಾಶ ಸಿಗದಿದ್ದರೂ, ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯಲು ಬಯಸುತ್ತೇನೆ. ಮುಂದಿನ 12 ತಿಂಗಳು ಆಸ್ಟ್ರೇಲಿಯಾ ತಂಡ ಬಹಳಷ್ಟು ಪಂದ್ಯಗಳನ್ನು ಆಡಲಿದೆ. ಅವುಗಳಲ್ಲಿ ನನ್ನ ಸ್ಥಾನದಲ್ಲಿ ನಾನು ಉತ್ತಮ ಕ್ರಿಕೆಟ್ ಆಡಲು ಬಯಸುತ್ತೇನೆ. ಆರಂಭಿಕನಾಗಿ ತಂಡಕ್ಕೆ ಹೆಚ್ಚಿನ ರನ್ ಗಳಿಸ ಬೇಕು ಎಂಬ ಬಯಕೆ ಇದೆ' ಎಂದಿದ್ದಾರೆ.