ಹೈದರಾಬಾದ್: ಕ್ರಿಕೆಟರ್ ಯಜುವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ ಎಂಬ ವದಂತಿಗಳು ಹರಿಹಾದಾಡುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಬೌಲರ್ ಚಹಲ್ ಖುದ್ದಾಗಿ ಸ್ಪಷ್ಟನೆ ನೀಡಿದ್ದಾರೆ.
ಧನಶ್ರೀ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿದ್ದು, ಪ್ರತಿದಿನ ಏನಾದರೂ ಒಂದನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. 5 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಧನಶ್ರೀ, ಇದೀಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹೆಸರಿನ ಹಿಂದಿದ್ದ ಪತಿ ಚಹಾಲ್ ಅವರ ಹೆಸರನ್ನು ತೆಗೆದುಹಾಕಿದ್ದರು. ಇದರ ಬೆನ್ನಲ್ಲೇ ಇಬ್ಬರ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎಂಬ ವದಂತಿ ಹಬ್ಬಿತ್ತು. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗಿತ್ತು.
ಸ್ಪಷ್ಟನೆ ನೀಡಿದ ಚಹಲ್: ಧನಶ್ರೀ ಜೊತೆಗಿನ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿಲ್ಲ ಎಂದು ಇದೀಗ ಚಹಲ್ ಸ್ಪಷ್ಟನೆ ನೀಡಿದ್ದಾರೆ. ವೈವಾಹಿಕ ಜೀವನದ ಬಗ್ಗೆ ಪ್ರಕಟಗೊಂಡಿರುವ ವದಂತಿ ನಂಬಬೇಡಿ. ನಿಮ್ಮೆಲ್ಲರ ಬಳಿ ನಾನು ವಿನಮ್ರವಾಗಿ ವಿನಂತಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಯಾವುದೇ ರೀತಿಯ ಸುದ್ದಿ ನಂಬಬೇಡಿ ಎಂದಿದ್ದು, ನಮ್ಮ ಬಾಂಧವ್ಯದ ಕುರಿತಾದ ಯಾವುದೇ ವದಂತಿಗಳನ್ನು ದಯವಿಟ್ಟು ನಂಬಬೇಡಿ. ಇದಕ್ಕೆ ಇಲ್ಲಿಯೇ ಅಂತ್ಯಹಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.