ಲಂಡನ್ :ಕ್ರಿಕೆಟ್ ಪ್ರೀತ್ಸೋರೆಲ್ಲಾ ಈಗ ತಿನ್ನೋವಾಗ, ಮಲಗೋವಾಗ, ಆಡೋವಾಗ, ಯೋಚಿಸೋವಾಗ, ಮಾತ್ನಾಡೋವಾಗ ಎಲ್ಲವೂ ವರ್ಲ್ಡ್‌ಕಪ್ ಕ್ರಿಕೆಟ್ ಬಗ್ಗೆಯೇ ಇರುತ್ತೆ. ಯಾಕಂದ್ರೇ, ಇನ್ನೂ ಎರಡೇ ದಿನ ಬಾಕಿ. ಕ್ರಿಕೆಟ್ ಹಂಗಾಮಾ ಶುರುವಾಗುತ್ತೆ. ಅಂದಹಾಗೇ ಈ ಸಾರಿ ಗೆದ್ದ ತಂಡ ಕೈಯಲ್ಲಿ ಹಿಡಿಯೋಕಾಗದಷ್ಟು ಕಾಸು ಪಡೆಯಲಿದೆ.
12ನೇ ವಿಶ್ವಕಪ್ ಗೆಲ್ಲಲು ರಣಕಣದಲ್ಲಿ ಮದಗಜಗಳ ಕಾದಾಟ :
ಜಂಟಲ್ಮನ್ ಗೇಮ್ ಕ್ರಿಕೆಟ್‌ನ ವಿಶ್ವಕಪ್ ಸಮರಕ್ಕೆ ಇನ್ನೇನು ಎರಡೇ ದಿನ ಬಾಕಿ. ವಿಶ್ವದ ಎಲ್ಲಾ ಕ್ರಿಕೆಟ್ ಪ್ರೆಮಿಗಳ ಚಿತ್ತ ಈಗ ಇಂಗ್ಲೆಂಡ್ ನತ್ತ ನೆಟ್ಟಿದೆ. 12ನೇ ವಿಶ್ವಕಪ್ ಟೂರ್ನಿಗೆ ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ಆತಿಥ್ಯವಹಿಸಿದೆ. ಮೇ 30ರಿಂದ ಜುಲೈ 1ರವರೆಗೆ ನಡೆಯಲಿರುವ ಮಹಾ ಸಂಗ್ರಾಮದಲ್ಲಿ 10 ತಂಡ ಭಾಗವಹಿಸಲಿವೆ. 47 ದಿನ 48 ಪಂದ್ಯ ನಡೆಯಲಿದ್ದು, 11 ಮೈದಾನ ಅದ್ದೂರಿ ಟೂರ್ನಿಗೆ ಸಿದ್ಧವಾಗಿವೆ. ವಿಶ್ವಕ್ಕೆ ಕ್ರಿಕೆಟ್ ಆಟ ಪರಿಚಯಿಸಿದ್ದ ಆಂಗ್ಲರ ನಾಡಿನಲ್ಲಿ ಈಗ 5ನೇ ಬಾರಿ ವರ್ಲ್ಡ್‌ಕಪ್ ಟೂರ್ನಿ ಆಯೋಜಿಸಲಾಗಿದೆ. ಕ್ರಿಕೆಟ್ ಎಲ್ಲರಿಗೂ ಅಚ್ಚುಮೆಚ್ಚು. ಮನರಂಜನೆ ಜತೆಗೆ ಕಾಂಚಾಣಕ್ಕೂ ಇಲ್ಲಿ ಬರವಿಲ್ಲ. ಜಗತ್ತಿನ ಯಾವುದೇ ದೇಶದಲ್ಲಿ ಕ್ರಿಕೆಟ್ ಟೂರ್ನಿ ನಡೆಸಿದ್ರೂ ಅಲ್ಲಿ ಹಣದ ಹೊಳೆ ಹರಿಯುತ್ತೆ.
ವಿಶ್ವ ಚಾಂಪಿಯನ್ ಆದವರಿಗಿದೆ ಬಂಪರ್ ಬಹುಮಾನ :
ಈ ಬಾರಿ ಬಹುಮಾನದ ಮೊತ್ತ ಬರೋಬ್ಬರಿ 10 ಮಿಲಿಯನ್ ಡಾಲರ್ ಅಂದ್ರೇ 69.46 ಕೋಟಿ ರೂಪಾಯಿ. ಚಾಂಪಿಯನ್ ತಂಡ ಬರೋಬ್ಬರಿ 27.79 ಕೋಟಿ ಪಡೆದ್ರೇ, ರನ್ನರಪ್ ತಂಡ ಇದರ ಅರ್ಧ ಮೊತ್ತ ಪಡೆಯಲಿದೆ. ಸೆಮಿಫೈನಲ್ ಪ್ರವೇಶಿಸಿದ ತಂಡಗಳಿಗೆ ತಲಾ 8 ಲಕ್ಷ ಡಾಲರ್ ಅಂದ್ರೇ ಭಾರತೀಯ ಕರೆನ್ಸಿ ಲೆಕ್ಕದಲ್ಲಿ 5.56 ಕೋಟಿ ರೂ. ಸಿಗಲಿದೆ. ಲೀಗ್ ಪಂದ್ಯ ಗೆಲ್ಲುವ ತಂಡಗಳು ತಲಾ 27.80 ಲಕ್ಷ ರೂ. ಪಡೆದುಕೊಳ್ಳುತ್ತವೆ. ಲೀಗ್ನಲ್ಲಿ ಆಡುವ ಪ್ರತಿ ತಂಡ 69.51ಲಕ್ಷ ರೂ. ತಮ್ಮದಾಗಿಸಿಕೊಳ್ಳಲಿದೆ. ಈ ಬಾರಿ ವರ್ಲ್ಡ್‌ಕಪ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ.
ಯಾವ್ಯಾವ ತಂಡಗಳು ಎಷ್ಟೆಷ್ಟು ಬಾರಿ ವರ್ಲ್ಡ್‌ಕಪ್ ಗೆದ್ದಿವೆ?:
ಟೂರ್ನಿಯಲ್ಲಿ ಭಾಗವಹಿಸುವ 10ರಲ್ಲಿ ಏಷ್ಯಾ ಖಂಡದ 5 ಟೀಂಗಳು ಭಾಗವಹಿಸ್ತಿರುವುದು ಮತ್ತೊಂದು ವಿಶೇಷ. ಇದೇ ಮೊದಲ ಬಾರಿಗೆ ಟೂರ್ನಿಯಿಂದ ಜಿಂಬಾಬ್ವೆ ಹೊರಬಿದ್ದಿದೆ. ಅದೇ ಸ್ಥಾನಕ್ಕೆ ಆಪ್ಘಾನಿಸ್ತಾನ ಅರ್ಹತೆ ಗಿಟ್ಟಿಸಿ ಅಚ್ಚರಿ ಮೂಡಿಸಿದೆ.1983ರಿಂದ ಈವರೆಗೂ 9 ಟೂರ್ನಿಗಳನ್ನ ಆಡಿದ ಜಿಂಬಾಬ್ವೆ ಈ ಬಾರಿ ಅರ್ಹತೆ ಪಡೆದಿಲ್ಲ. ಕಳೆದ 11 ಆವೃತ್ತಿಗಳಲ್ಲಿ ಕೇವಲ 5 ತಂಡ ಮಾತ್ರ ವಿಶ್ವಕಪ್ ಪ್ರಶಸ್ತಿ ಗೆದ್ದಿವೆ. ಬಲಾಡ್ಯ ಆಸ್ಟ್ರೇಲಿಯಾ 5 ಬಾರಿ, ಭಾರತ ಮತ್ತು ವೆಸ್ಟಇಂಡೀಸ್ ತಲಾ 2 ಬಾರಿ ಚಾಂಪಿಯನ್ ಆಗಿವೆ. ಪಾಕ್ ಮತ್ತು ಶ್ರೀಲಂಕಾ ತಂಡ ತಲಾ ಒಂದೊಂದು ಬಾರಿ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿವೆ. ಕ್ರಿಕೆಟ್‌ನ ಮಹಾಸಂಗ್ರಾಮದಲ್ಲಿ ಮಿಂಚುವ ಟ್ರೋಫಿ ಜತೆ ಕಾಂಚಾಣವೂ ಕೈತುಂಬ ಸಿಗುತ್ತೆ. ಅದಕ್ಕಾಗಿಯೇ ಜೇಬು ತುಂಬಿಸಿಕೊಳ್ಳೋದಕ್ಕೆಂದೇ 10 ತಂಡ ಸರ್ಕಸ್ ಮಾಡಿಲಿವೆ. ಫ್ಯಾನ್ಸ್ 47 ದಿನ ಕ್ರಿಕೆಟ್ ಗುಂಗಿನಲ್ಲೇ ಇರಲಿದ್ದಾರೆ.