ಹೈದರಾಬಾದ್ : ಟಿ-20 ವಿಶ್ವಕಪ್‌ನ ಆರಂಭಕ್ಕೆ ಇನ್ನೂ ಎರಡು ತಿಂಗಳು ಬಾಕಿ ಇದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಎಲ್ಲ ತಂಡಗಳು ಬಲಿಷ್ಠ ತಂಡ ಕಣಕ್ಕಿಳಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದು, ಟಿ-20 ಮಹಾ ಸಮರಕ್ಕೆ ಅಂತಿಮ ಹಂತದ ಸಿದ್ಧತೆ ನಡೆಸಿವೆ.
ಈ ಬಗ್ಗೆ ಇಂಗ್ಲೆಂಡ್ ಟಿ-20 ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಪ್ರತಿಕ್ರಿಯಿಸಿದ್ದು, ಟಿ - 20 ವಿಶ್ವಕಪ್‌ನ ದೃಷ್ಟಿಯಿಂದ ಕಳೆದ ಎರಡು ವರ್ಷಗಳಲ್ಲಿ ಇಂಗ್ಲೆಂಡ್ ತಂಡ ನೀಡಿದ ಪ್ರದರ್ಶನ ಮುಂದುವರೆಸುವ ಅಗತ್ಯವಿದೆ ಎಂದಿದ್ದಾರೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುವ ಮೂಲಕ ಟೂರ್ನಿ ಆರಂಭಿಸಲಿದೆ. ಅಬುದಾಬಿ ಸ್ಟೇಡಿಯಂನಲ್ಲಿ ಅಕ್ಟೋಬರ್ 23ರಂದು ಪಂದ್ಯ ನಡೆಯಲಿದೆ. ಈ ಬಾರಿಯ ಟಿ-20 ವಿಶ್ವಕಪ್‌ನ ಪಂದ್ಯಗಳು ಭಾರತದಲ್ಲಿ ನಡೆಯಬೇಕಾಗಿತ್ತು. ಆದರೆ, ಭಾರತದಲ್ಲಿ ಕೊರೊನಾ ಆತಂಕ ಹೆಚ್ಚಿರುವ ಕಾರಣದಿಂದಾಗಿ ಒಮನ್ ಹಾಗೂ ಯುಎಇನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ.
"ಕಳೆದ ಎರಡು ವರ್ಷಗಳಲ್ಲಿ ನಾವು ಅತ್ಯಂತ ಸ್ಥಿರವಾದ ಪ್ರದರ್ಶನ ನೀಡಿಕೊಂಡು ಬಂದಿದ್ದೇವೆ. ಟಿ-20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾದ ಆಟ ಮುಖ್ಯವಾಗಿದೆ. ಈ ವಿಶ್ವಕಪ್ ಟೂರ್ನಿಯಲ್ಲಿ ನಮ್ಮ ಗುಂಪಿನಲ್ಲಿ ಸಾಕಷ್ಟು ಬಲಿಷ್ಠ ತಂಡಗಳು ಇವೆ. ಹೀಗಾಗಿ ಪ್ರತಿ ಪಂದ್ಯಗಳು ಕೂಡ ನಮಗೆ ಅತ್ಯಂತ ಮುಖ್ಯವಾಗಿವೆ" ಎಂದು ಇಯಾನ್ ಮಾರ್ಗನ್ ಹೇಳಿದ್ದಾರೆ.