ನವದೆಹಲಿ: ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ತಮ್ಮ ಮತ್ತು ಸಚಿನ್ ನಡುವಿನ ಮೊದಲ ಭೇಟಿಯನ್ನು ನೆನಪಿಸಿಕೊಂಡಿದ್ದು, ಅಂದು ‘ನಾನು ದೇವರ ಕೈಕುಲುಕಿದಂತೆ ಭಾಸವಾಗುತ್ತಿತ್ತು’ಎಂದು ಹೇಳಿದ್ದಾರೆ.
ಎಲ್ಲ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿ ಒಂದು ವರ್ಷ ಪೂರ್ಣಗೊಂಡ ವಿಚಾರವನ್ನು ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ ಆಲ್ರೌಂಡರ್ಗೆ ಶುಭ ಹಾರೈಸಿದ್ದರು. ಇದೀಗ ಸಚಿನ್ ಟ್ವೀಟ್ಗೆ ಯುವರಾಜ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದಿಗೆ ಒಂದು ವರ್ಷದ ಹಿಂದೆ ಯವಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ಬಗ್ಗೆ ಹಿಂದಿನ ನೆನಪು ಹಂಚಿಕೊಂಡಿರುವ ಸಚಿನ್ ತಾವೂ ಯುವಿಯನ್ನು ಮೊದಲ ಭೇಟಿ ಮಾಡಿದ್ದ ದಿನಗಳ ಬಗ್ಗೆ ಟ್ವೀಟ್ ಮಾಡಿದ್ದರು.
"ನಾನು ನಿಮ್ಮನ್ನು ಮೊದಲು ನೋಡಿದ್ದು ಚೆನ್ನೈನಲ್ಲಿ ನಡೆದಿದ್ದ ಕ್ಯಾಂಪ್‌ನಲ್ಲಿ ಹಾಗೂ ಆ ವೇಳೆ ನಿಮಗೆ ನಾನು ಸಹಾಯ ಮಾಡಲಾಗಿರಲಿಲ್ಲ. ಆದರೆ, ನೀವೊಬ್ಬ ಅತ್ಯುತ್ತಮ ಕ್ರೀಡಾಪಟು ಮತ್ತು ಪಾಯಿಂಟ್‌ನಲ್ಲಿ ಅತ್ಯಂತ ಚುರುಕಾದ ಫೀಲ್ಡರ್ ಎಂಬುದು ನನಗೆ ಅರಿವಾಗಿತ್ತು. ನೀವು ಸಿಡಿಸಿದ್ದ 6 ಸಿಕ್ಸರ್‌ಗಳ ಬಗ್ಗೆ ನಾನು ಹೇಳುವ ಅಗತ್ಯವಿಲ್ಲ, ವಿಶ್ವದ ಯಾವುದೇ ಕ್ರೀಡಾಂಗಣದಲ್ಲಾದರೂ ಚೆಂಡನ್ನು ಹೊರಗೆ ಕಳುಹಿಸುತ್ತೀರಿ ಎನ್ನುವುದಕ್ಕೆ ಇದೊಂದೆ ಸಾಕ್ಷಿ" ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಯುವರಾಜ್ ಸಿಂಗ್ , ".ಧನ್ಯವಾದಗಳು ಮಾಸ್ಟರ್, ನಾವು ಮೊದಲ ಸಲ ಭೇಟಿಯಾದಾಗ ನಾನು ದೇವರ ಕೈ ಕುಲುಕಿದ್ದೇನೆ ಎಂದು ಭಾವಿಸಿದ್ದೆ. ಕಠಿಣ ಸಂದರ್ಭಗಳಲ್ಲಿ ನೀವು ನನಗೆ ಮಾರ್ಗದರ್ಶನ ನೀಡಿದ್ದೀರಿ. ನನ್ನ ಸಾಮರ್ಥ್ಯಗಳನ್ನು ನಂಬುವುದನ್ನು ನೀವು ಕಲಿಸಿದ್ದೀರಿ. ನಾನು ಕೂಡ ಯುವಕರಲ್ಲಿ ಅದೇ ಪಾತ್ರವನ್ನು ನಿರ್ವಹಿಸುತ್ತೇನೆ. ನಿಮ್ಮೊಂದಿಗೆ ಇನ್ನು ಅನೇಕ ಅದ್ಭುತ ನೆನಪುಗಳಿಗೆ ಎದುರು ನೋಡುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ
ಕಳೆದ ವರ್ಷ ಜೂನ್ 10 ರಂದು ಯುವರಾಜ್ ಸಿಂಗ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅವರು 2003ರ ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 304 ಏಕದಿನ ಪಂದ್ಯಗಳಿಂದ 14 ಶತಕಗಳ ಸಹಿತ 8701 ರನ್ ಹಾಗೂ 40 ಟೆಸ್ಟ್ ಪಂದ್ಯಗಳಿಂದ 2 ಶತಕಗಳ ಸಹಿತ 1,900 ರನ್ ಗಳಿಸಿದ್ದಾರೆ. 58 ಟಿ-20 ಪಂದ್ಯಗಳಿಂದ 1177 ರನ್ ಗಳಿಸಿದ್ದಾರೆ.