ನವದೆಹಲಿ: ಶಿಖರ್ ಧವನ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 5 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಪಂಜಾಬ್ ನೀಡಿದ 164 ರನ್ಗಳ ಗುರಿಯನ್ನು 19.4 ಓವರ್ಗಳಲ್ಲಿ ತಲುಪುವ ಮೂಲಕ 12ನೇ ಆವೃತ್ತಿಯಲ್ಲಿ 6ನೇ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಮುಂದುವರೆದಿದೆ.
164 ರನ್ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಆರಂಭಿಕ ಆಟಗಾರ ಧವನ್ (56) ಆಕರ್ಷಕ ಅರ್ಧಶತಕ ಸಿಡಿಸಿ ಉತ್ತಮ ಆರಂಭ ನೀಡಿದರು. ಧವನ್ ಮಾಡಿದ ಆತುರಕ್ಕೆ ಪೃಥ್ವಿ ಶಾ ರನೌಟ್ಗೆ ಬಲಿಯಾದರು. ಆದರೆ ಈ ವೇಳೆ ಜೊತೆಗೂಡಿದ ನಾಯಕ ಶ್ರೇಯಸ್ ಅಯ್ಯರ್ (58) ಧವನ್ ಜೊತೆ 92 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಸನಿಹ ತಂದರು.
ಈ ಹಂತದಲ್ಲಿ ಧವನ್ 56 ರನ್ಗಳಿಸಿ ಔಟಾದರೆ, ಪಂತ್ 6, ಇಂಗ್ರಾಮ್ 19, ಅಕ್ಷರ್ ಪಟೇಲ್ 1 ರನ್ ಗಳಿಸಿ ಗೆಲುವಿನ ಸನಿಹದಲ್ಲಿದ್ದಾಗ ವಿಕೆಟ್ ಒಪ್ಪಿಸಿ ಗೆಲುವನ್ನು ಕೊನೆಯ ಓವರ್ತನಕ ಹೋಗುವಂತೆ ಮಾಡಿದರು. ಆದರೆ ಅಯ್ಯರ್ ಔಟಾಗದೆ 58 ಹಾಗೂ ರುದರ್ಫರ್ಡ್ ಔಟಾಗದೆ 2 ರನ್ ಗಳಿಸಿ ವಿಕೆಟ್ ನೀಡದೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂಜಾಬ್ ಪರ ಶಮಿ 1, ಹಾರ್ಡಸ್ ವಿಜೋನ್ 2 ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡ ಕ್ರಿಸ್ ಗೇಲ್ ಅಬ್ಬರದ ಅರ್ಧಶತಕ (37 ಎಸೆತಗಳಲ್ಲಿ 69), ಮಂದೀಪ್ ಸಿಂಗ್ 30 ರನ್ ಹಾಗೂ ಹರಪ್ರೀತ್ ಬ್ರಾತ್ ಗಳಿಸಿದ 20 ರನ್ಗಳ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 163 ರನ್ ಪೇರಿಸಿತ್ತು. ಡೆಲ್ಲಿ ಪರ ಸಂದೀಪ್ ಲಾಮಿಚ್ಚನ್ 3, ರಬಾಡಾ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು. ಇನ್ನು ಈ ಗೆಲುವಿನಿಂದ ಡೆಲ್ಲಿ 12 ಪಾಯಿಂಟ್ಸ್ ಪಡೆದಿದ್ದು, ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.