ಹೈದರಾಬಾದ್:ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಬೇರೆ ದೇಶದಲ್ಲಿ ನಡೆಯುವುದು ಬಹುತೇಕ ಕನ್ಫರ್ಮ್ ಎಂದು ಹೇಳಲಾಗ್ತಿದೆ.
ಪ್ರಸಕ್ತ ಸಾಲಿನ ಐಪಿಎಲ್ ನಡೆಸುವ ರೇಸ್ನಲ್ಲಿ ಯುಎಇ ಹಾಗೂ ಶ್ರೀಲಂಕಾ ಇವೆ. ಆದರೆ ಟೂರ್ನಿ ದುಬೈನಲ್ಲಿ ನಡೆಸಲು ಬಿಸಿಸಿಐ ಮುಂದಾಗಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದ್ದು, ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುವ ಕೆಲಸದಲ್ಲಿ ನಾವು ಮಗ್ನರಾಗಿದ್ದೇವೆ ಎಂದು ದುಬೈ ಸ್ಪೋರ್ಟ್ಸ್ ಸಿಟಿ ಆಫ್ ಕ್ರಿಕೆಟ್ನ ಮುಖ್ಯಸ್ಥ ಸಲ್ಮಾನ್ ತಿಳಿಸಿದ್ದಾರೆ.
ದುಬಾೖ, ಶಾರ್ಜಾ ಮತ್ತು ಅಬುಧಾಬಿಯ ಖಾಲಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಇಲ್ಲದೆ ಐಪಿಎಲ್ ಟೂರ್ನಮೆಂಟ್ ನಡೆಸಲು ಬಿಸಿಸಿಐ ಮುಂದಾಗಿದ್ದು, ಮೂಲಗಳ ಪ್ರಕಾರ ಬಿಸಿಸಿಐ ವಾರ್ಷಿಕ ಒಪ್ಪಂದದಲ್ಲಿರುವ ಆಟಗಾರರಿಗೆ ಯುಎಇನಲ್ಲಿ ರಾಷ್ಟ್ರೀಯ ತರಬೇತಿ ಶಿಬಿರ ಏರ್ಪಡಿಸಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ.
ಬರುವ ಸೆಪ್ಟೆಂಬರ್ ತಿಂಗಳಿಂದ ನವೆಂಬರ್ವರೆಗೆ ಐಪಿಎಲ್ ನಡೆಸುವ ಯೋಜನೆಯನ್ನು ಬಿಸಿಸಿಐ ಹಾಕಿಕೊಂಡಿದ್ದು, ಅದೇ ವಿಷಯವಾಗಿ ಇಂದು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆ ನಡೆಸುತ್ತಿದೆ. ಈ ಹಿಂದೆ 2009ರಲ್ಲಿ ಭಾರತದಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದ ಕಾರಣ ಐಪಿಎಲ್ ಟೂರ್ನಮೆಂಟ್ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಗೊಂಡಿತ್ತು.