ಬೆಂಗಳೂರು:ಭಾರತ ಕ್ರಿಕೆಟ್ ಇತಿಹಾಸದಲ್ಲಿ ಒಬ್ಬರೇ ಧೋನಿ, ಮತ್ತೊಬ್ಬ ಬರುವುದಕ್ಕೆ ಸಾಧ್ಯವಿಲ್ಲ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅಭಿಪ್ರಾಯಪಟ್ಟಿದ್ದಾರೆ.
ಧೋನಿ ಶನಿವಾರ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ನಿವೃತ್ತಿ ಘೋಷಿಸಿದ್ದು, 16 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ.
ಬಿಸಿಸಿಐ ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮಿಥಾಲಿ ರಾಜ್ ಧೋನಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರು ದೇಶದ ಪರ ಆಡಬೇಕು, ಏನಾದರೂ ಸಾಧಿಸಬೇಕು ಎಂದು ಬಯಸುವ ಸಣ್ಣ ಪುಟ್ಟ ಪಟ್ಟಣಗಳ ಹುಡುಗರಿಗೆ ಒಂದು ಕನಸು ಎಂದು ಹೇಳಿದ್ದಾರೆ.
ಗೌರವ, ಖ್ಯಾತಿ ಮತ್ತು ಹಲವಾರು ಜನರ ಪ್ರೀತಿ ಗಳಿಸಿಕೊಂಡಿದ್ದಾರೆ. ಕಠಿಣ ಸಂದರ್ಭದಲ್ಲಿ ಅವರ ಆಟ, ಸಹಜತೆ ಮತ್ತು ತಾಳ್ಮೆ ತೋರುವುದಕ್ಕೆ ನಾನು ಅವರನ್ನು ಮೆಚ್ಚುತ್ತೇನೆ. ಬ್ಯಾಟಿಂಗ್ ಅಥವಾ ವಿಕೆಟ್ ಕೀಪಿಂಗ್ ಆಗಿರಲಿ ಧೋನಿ ತಮ್ಮದೇ ಆದ ವಿಶೇಷ ಶೈಲಿ ಹೊಂದಿದ್ದಾರೆ.
ಯಾವುದೇ ಕ್ರಿಕೆಟ್ ಪುಸ್ತಕದಲ್ಲಿರದ ಹೆಲಿಕಾಪ್ಟರ್ ಶಾಟ್ಗಳು ಧೋನಿ ಅವರ ಸ್ವಂತಿಕೆ, ಪ್ರತಿಭೆ ಮತ್ತು ನಂಬಿಕೆಗೆ ಸಾಕ್ಷಿಯಾಗಿವೆ. ಅವರಂತೆ ಮತ್ತೊಬ್ಬ ಇರುವುದಿಲ್ಲ. ಎಂಎಸ್ ಧೋನಿ ಕ್ರಿಕೆಟ್ನಲ್ಲಿ ಸೃಷ್ಟಿಯಾಗಿರುವ ಶಾಶ್ವತ ದಂತಕತೆ ಎಂದು ಮಿಥಾಲಿ ರಾಜ್ ಹೇಳಿದ್ದಾರೆ.