ಮುಂಬೈ: ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿವಿಧ ದೇಶಗಳ ಕ್ರಿಕೆಟ್ ಮಂಡಳಿಗಳ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ(ಸಿಇಒ)ಗಳ ಸಭೆಯನ್ನು ಕರೆದಿದೆ. ಆದರೆ ವರ್ಷದ ಕೊನೆಯಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಬಗ್ಗೆ ಇನ್ನು ಸ್ಪಷ್ಟ ನಿರ್ದೇಶನ ಸಿಕ್ಕಿಲ್ಲ. ಈ ಸಭೆಯಲ್ಲಿ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.
ವಿಶ್ವದೆಲ್ಲೆಡೆ ಕೊರೊನಾ ಸೋಂಕು ಹರಡುತ್ತಿರುವುದು ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯುವ ಈ ಬೃಹತ್ ಕೂಟ ಆಯೋಜಿಸುವುದು ಸಂಶಯವೆಂದು ಬಿಸಿಸಿಐ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಬಂದು ಜನಜೀವನ ಸಹಜಸ್ಥಿತಿಗೆ ಮರಳಿದ ಬಳಕವೇ ಈ ಬಗ್ಗೆ ಆಲೋಚನೆ ಮಾಡುವುದು ಸೂಕ್ತವೆಂದು ಅವರು ಹೇಳಿದ್ದಾರೆ.
ನಿಜ ಹೇಳಬೇಕೆಂದರೆ ಅಕ್ಟೋಬರ್ನಲ್ಲಿ ಟಿ20 ವಿಶ್ವಕಪ್ ಆಯೋಜನೆ ಮಾಡಬೇಕೆಂಬುದು ಅಪ್ರಯೋಗಿಕವಾಗಿದೆ. ಇಂತಹ ಸಂದರ್ಭದಲ್ಲಿ ಬೃಹತ್ ಪ್ರಮಾಣದ ಜನರನ್ನು ಒಟ್ಟುಗೂಡಿಸುವ ಇಂತಹ ಟೂರ್ನಿಗಳನ್ನು ಆಯೋಜನೆ ಮಾಡುವುದು ತಪ್ಪು.
ಈ ಹಂತದಲ್ಲಿ ಯಾವಾಗ ಅಂತಾರಾಷ್ಟ್ರೀಯ ಪ್ರಯಾಣ ಸುರಕ್ಷಿತ ಎಂಬುದು ತಿಳಿದಿಲ್ಲ. ಕೆಲವರು ಜೂನ್ ಎಂದೂ, ಮತ್ತೆ ಕೆಲವರು ಇನ್ನಷ್ಟು ದೀರ್ಘ ಸಮಯ ಬೇಕಾಗಬಹುದೆಂದು ಹೇಳುತ್ತಾರೆ. ಒಮ್ಮೆ ಪ್ರಯಾಣ ಆರಂಭವಾದ ಬಳಿಕ ಕೊರೊನಾ ರೋಗ ನಿಯಂತ್ರಣದಲ್ಲಿ ಇದೆಯೋ ಅಥವಾ ಇಲ್ಲವೋ ಎಂಬುದರ ಅಧ್ಯಯನ ವಿವೇಕಯುತವಾದುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಇನ್ನು ಇಂತಹ ಬೃಹತ್ ಕೂಟ ಆಯೋಜಿಸುವ ವೇಳೆ ಆಟಗಾರರ ಮತ್ತು ಅಭಿಮಾನಿಗಳ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಬೇಕಾಗಿದೆ. ಈ ಬಗ್ಗೆ ಆತಿಥ್ಯ ವಹಿಸುವ ಸರ್ಕಾರ ಎಲ್ಲ ವ್ಯವಸ್ಥೆ ಮಾಡಬೇಕಾಗಿದೆ ಇದರ ಜವಾಬ್ದಾರಿಯನ್ನು ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯ ವಹಿಸಿಕೊಳ್ಳಬೇಕಾಗಿದೆ. ಆಸ್ಟ್ರೇಲಿಯಾ ಸರ್ಕಾರ ಇಂತಹ ದೊಡ್ಡ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದೆಯಾ? ಅವರು ಇದನ್ನು ಒಪ್ಪಿಕೊಳ್ಳಲು ಎಷ್ಟು ಸಮಯ ಬೇಕು? ಆ ಸಮಯ ಇತರೆ ಕ್ರಿಕೆಟ್ಬೋರ್ಡ್ಗಳಿಗೆ ಸರಿಯನಿಸಲಿದೆಯಾ? ಇತರೆ ದೇಶಗಳ ಸರ್ಕಾರಗಳು ತಂಡದ ಪ್ರಯಣಕ್ಕೆ ಅವಕಾಶ ನೀಡಲಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಒಂದು ವೇಳೆ ಟೂರ್ನಿ ಆಯೋಜನೆಗೊಂಡರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು 10 ಸೀಟ್ಗಳಿಗೆ ಒಂದು ಸೀಟ್ ನಿಯೋಜನೆ ಮಾಡಬೇಕಿದೆ. ಇದರಿಂದ ಟಿಕೆಟ್ ಹಂಚಿಕೆ ಹೇಗೆ ನಡೆಯಲಿದೆ ಎಂದು ಪ್ರಶ್ನಿಸುವ ಮೂಲಕ ವಿಶ್ವಕಪ್ ನಡೆಯುವ ಸಾಧ್ಯತೆ ಕಡಿಮೆ ಎಂದು ಐಸಿಸಿ ಸಭೆಗೂ ಮೊದಲೇ ಅನುಮಾನ ವ್ಯಕ್ತಪಡಿಸಿದ್ದಾರೆ.