ಬೆಂಗಳೂರು: ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಕರ್ನಾಟಕ ತಂಡ 5 ವಿಕೆಟ್ಗಳ ಅಂತರದಿಂದ ಉತ್ತರ ಪ್ರದೇಶವನ್ನು ಮಣಿಸಿದೆ.
ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಉತ್ತರ ಪ್ರದೇಶ ತಂಡ 20 ಓವರ್ಗಳಲ್ಲಿ 132 ರನ್ಗಳಿಸಿತ್ತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿದ್ದ ಯುಪಿ ತಂಡ ಮೊದಲ ವಿಕೆಟ್ಗೆ 69 ರನ್ ಸೇರಿಸಿ ಅತ್ಯುತ್ತಮ ಆರಂಭ ಪಡೆದಿತ್ತು. ಆದರೆ ಪ್ರವೀಣ್ ದುಬೆ ಮತ್ತು ಸುಚಿತ್ ದಾಳಿಗೆ ಸಿಲುಕಿ ದಿಢೀರ್ ಕುಸಿತ ಕಂಡು 132ಕ್ಕೆ ತೃಪ್ತಿಪಟ್ಟುಕೊಂಡಿತು.
ಆರಂಭಿಕರಾದ ಅಭಿಷೇಕ್ ಗೋಸ್ವಾಮಿ 47 ಹಾಗೂ ಕರಣ್ ಶರ್ಮಾ 41 ರನ್ಗಳಿಸಿದ್ದು, ಬಿಟ್ಟರೆ, ಸುರೇಶ್ ರೈನಾ ಸೇರಿದಂತೆ ಯಾವೊಬ್ಬ ಬ್ಯಾಟ್ಸ್ಮನ್ ಎರಡಂಕಿ ಮೊತ್ತ ಗಳಿಸಲು ವಿಫಲರಾದರು.
ಕರ್ನಾಟಕ ಪರ ಪ್ರವೀಣ್ ದುಬೆ 15ಕ್ಕೆ 3, ಜೆ. ಸುಚಿತ್ 21ಕ್ಕೆ 3, ವಿ. ಕೌಶಿಕ್ 20ಕ್ಕೆ1, ಗೋಪಾಲ್ 22ಕ್ಕೆ1 ವಿಕೆಟ್ ಪಡೆದು ಮಿಂಚಿದರು.
ಇನ್ನು 133 ರನ್ಗಳ ಗುರಿ ಪಡೆದಿದ್ದ ಕರ್ನಾಟಕ ತಂಡ ರನ್ ರೇಟ್ ಹೆಚ್ಚಿಸಿಕೊಳ್ಳುವ ಭರದಲ್ಲಿ 49 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ದೇವದತ್ ಪಡಿಕ್ಕಲ್ 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 34 ರನ್ಗಳಿಸಿದರೆ, ಕಡಮ್ 5, ಮತ್ತು ಶ್ರೀಜಿತ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.
ಆದರೆ ಶ್ರೇಯಸ್ ಗೋಪಾಲ್ 28 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 47 ರನ್ಗಳಿಸಿ ಕರ್ನಾಟಕಕ್ಕೆ ಸಮಾಧಾನಕರ ಜಯ ತಂದುಕೊಟ್ಟರು. ಅನಿರುದ್ಧ ಜೋಶಿ 32 ಎಸೆತಗಳಲ್ಲಿ 21 ರನ್ಗಳಿಸಿ ಔಟಾಗಿದ್ದರಿಂದ ತಂಡಕ್ಕೆ ಭಾರಿ ಹಿನ್ನಡೆಯಾಗಿತ್ತು. ಆದರೆ ಗೋಪಾಲ್ ಸ್ಫೋಟಕ ಬ್ಯಾಟಿಂಗ್ ತಂಡವನ್ನು ಸೋಲಿನಿಂದ ಪಾರು ಮಾಡಿತು
ಈಗಾಗಲೇ ಗುಂಪಿನಲ್ಲಿ ಪಂಜಾಬ್ ತಂಡ 20 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಕರ್ನಾಟಕ ತಂಡ 16 ಅಂಕ ಪಡೆದಿದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಲು ನಾಳೆ ನಡೆಯುವ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಿದೆ.
6 ಗುಂಪುಗಳಲ್ಲಿ ತಲಾ ಒಂದು ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಎಲ್ಲಾ ಗುಂಪುಗಳ ಉಳಿದ ತಂಡಗಳಲ್ಲಿ ಹೆಚ್ಚು ಅಂಕಪಡೆದ 2 ತಂಡಗಳಿಗೆ ಕ್ವಾರ್ಟರ್ ಫೈನಲ್ಗೇರುವ ಅವಕಾಶ ಸಿಗಲಿದೆ.