ಕೊಲೊಂಬೊ: ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯನ್ನು ಲಂಕಾ ತಂಡ ಇನ್ನೂ ಒಂದು ಪಂದ್ಯ ಉಳಿದಿರುವಂತೆ ವಶಪಡಿಸಿಕೊಂಡಿದೆ.
ಭಾನುವಾರ ನಡೆದ ಎರಡನೇ ಏಕದಿನ ಪಂದ್ಯವನ್ನು ಲಂಕಾ 7 ವಿಕೆಟ್ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 239 ರನ್ಗಳ ಟಾರ್ಗೆಟ್ ನೀಡಿತು.
ಈ ಮೊತ್ತವನ್ನು ಬೆನ್ನಟ್ಟಿದ ಲಂಕಾ ತಂಡ, ಫರ್ನಾಂಡೋ (82) ಕುಶಾಲ್ ಮೆಂಡಿಸ್(41*) ಮ್ಯಾಥ್ಯೂಸ್ (53*) ರನ್ಗಳ ನೆರವಿನಿಂದ 44.4 ಓವರ್ಗಳಲ್ಲಿ ಗುರಿ ತಲುಪಿ ಸರಣಿ ಕೈವಶ ಮಾಡಿಕೊಂಡಿತು. ಬಾಂಗ್ಲಾ ಪರ ರಹಮಾನ್ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಬಾಂಗ್ಲಾತಂಡಕ್ಕೆ ವಿಕೆಟ್ ಕೀಪರ್ ಮುಶ್ಫಿಕರ್ ರಹೀಮ್ 98 ರನ್ ಹಾಗೂ ಆಲ್ರೌಂಡರ್ ಮೆಹೆದಿ ಹಸನ್ 43 ರನ್ಗಳ ನೆರವಿನಿಂದ ಬಾಂಗ್ಲಾ238 ರನ್ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. 110 ಎಸೆತಗಳೆನ್ನುದುರಿಸಿ ರಹೀಮ್ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದರು.
ಲಂಕಾ ಪರ ಪ್ರದೀಪ್ 2, ಇಸುರು ಉದಾನ 2 ಹಾಗೂ ಧನಂಜಯ 2 ವಿಕೆಟ್ ಪಡೆದು ಮಿಂಚಿದರು. 75 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 9 ಬೌಂಡರಿ ಸಿಡಿಸಿದ ಆವಿಸ್ಕಾ ಫರ್ನಾಂಡೋ 82 ರನ್ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸತತ 2 ಪಂದ್ಯ ಗೆದ್ದ ಲಂಕಾ ತವರಿನಲ್ಲಿ 4 ವರ್ಷಗಳ ಬಳಿಕ ಏಕದಿನ ಸರಣಿ ಗೆದ್ದ ಸಾಧನೆ ಮಾಡಿತು. 4 ವರ್ಷಗಳ ಮಧ್ಯೆ ಐರ್ಲೆಂಡ್ನಲ್ಲಿ 2-0 ಹಾಗೂ ಸ್ಕಾಟ್ಲೆಂಡ್ ವಿರುದ್ಧ ಏಕೈಕ ಪಂದ್ಯದ ಸರಣಿಯನ್ನು ಶ್ರೀಲಂಕಾ ಗೆದ್ದಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಟೆಸ್ಟ್ ಆಡುವ ತಂಡದ ವಿರುದ್ಧ ಏಕದಿನ ಸರಣಿ ಗೆದ್ದಿದೆ.