ಮುಂಬೈ: 'ಕ್ರಿಡೆಗೆ ಜಗತ್ತನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ' ಎಂದ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಉಲ್ಲೇಖವನ್ನು ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹಂಚಿಕೊಂಡಿದ್ದಾರೆ.
ಕಪ್ಪು ವರ್ಣಿಯ ವ್ಯಕ್ತಿ ಹತ್ಯೆಯ ನಂತರ ಅಮೆರಿಕದಲ್ಲಿ ಪ್ರತಿಭಟನೆ ಹೆಚ್ಚಾಗಿದೆ. ಈ ಘಟನೆ ಕುರಿತಂತೆ ಸಚಿನ್ ತೆಂಡೂಲ್ಕರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 2019ರ ಪುರುಷರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದ ವಿಡಿಯೋವನ್ನು ಐಸಿಸಿ ಶೇರ್ ಮಾಡಿತ್ತು. ಈ ವಿಡಿಯೋವನ್ನು ಸಚಿನ್ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
'ವೈವಿಧ್ಯತೆಯಿಲ್ಲದೆ, ಕ್ರಿಕೆಟ್ ಏನೂ ಅಲ್ಲ. ವೈವಿಧ್ಯತೆಯಿಲ್ಲದೆ ನೀವು ಪೂರ್ಣ ಚಿತ್ರವನ್ನು ಪಡೆಯಲು ಸಾಧ್ಯವಿಲ್ಲ' ಎಂದು ಐಸಿಸಿ ವಿಡಿಯೋಗೆ ಶೀರ್ಷಿಕೆ ನೀಡಿತ್ತು.
ನೆಲ್ಸನ್ ಮಂಡೇಲಾ ಒಮ್ಮೆ ಹೇಳಿದ್ದರು, 'ಕ್ರೀಡೆ ಜಗತ್ತನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಜಗತ್ತನ್ನು ಒಂದುಗೂಡಿಸುವ ಶಕ್ತಿ ಕೂಡ ಕ್ರೀಡೆಗೆ ಇದೆ' ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ. ವೀಡಿಯೊದಲ್ಲಿ, ಜೋಫ್ರಾ ಆರ್ಚರ್ ಪಂದ್ಯಾವಳಿಯ ಕೊನೆಯ ಎಸೆತವನ್ನು ಎಸೆದಿದ್ದು ಮತ್ತು ಇಂಗ್ಲೆಂಡ್ ಚೊಚ್ಚಲ ವಿಶ್ವಕಪ್ ಎತ್ತಿಹಿಡಿದಿರುವುದನ್ನು ಕಾಣಬಹುದಾಗಿದೆ.
ಈ ಹಿಂದೆ, ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಡೇರೆನ್ ಸ್ಯಾಮಿ, ಸಾಮಾಜಿಕ ಅನ್ಯಾಯ ಮತ್ತು ವರ್ಣಭೇದ ನೀತಿಯ ವಿರುದ್ಧದ ಹೋರಾಟವನ್ನು ಬೆಂಬಲಿಸುವಂತೆ ಐಸಿಸಿ ಮತ್ತು ಇತರ ಕ್ರಿಕೆಟ್ ಮಂಡಳಿಗಳಿಗೆ ಮನವಿ ಮಾಡಿದ್ದರು.